ಬೆಳಗಾವಿಯ ಮೂರನೇ ರೇಲ್ವೆ ಗೇಟ್’ನಲ್ಲಿ ಉಂಟಾಗ ಗುಂಡಿಗಳ ಸಾಮ್ರಾಜ್ಯದ ವಿರುದ್ಧ ರಂಗೋಲಿ ಹಾಕುವ ಮೂಲಕ ಇಲ್ಲಿನ ನಾಗರೀಕರು ವಿನೂತನವಾಗಿ ಪ್ರತಿಭಟಿಸಿದರು. ಮುಂಬರುವ 2-3 ದಿನಗಳಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸದಿದ್ದರೇ, ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿಯ ನಾಲ್ಕನೇ ಗೇಟ್’ನಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಸಂಚಾರ ನಿರ್ಬಂಧಿಸಿದ್ದು, ಮೂರನೇ ರೇಲ್ವೆ ಗೇಟ್’ನಲ್ಲಿ ಸಂಚಾರದಟ್ಟಣೆಯಾಗಿ ರಸ್ತೆ ಹದಗೆಟ್ಟು, ಗುಂಡಿಗಳ ಸಾಮ್ರಾಜ್ಯ ನಿರ್ಮಾಣವಾಗಿದೆ. ಈ ಹಿನ್ನೆಲೆ ಜನರಿಗೆ ಉಂಟಾಗುತ್ತಿರುವ ಸಮಸ್ಯೆಗಾಗಿ ಜಿಲ್ಲಾಡಳಿತದ ಗಮನಸೆಳೆಯಲು ರಂಗೋಲಿ ಹಾಕುವ ಮೂಲಕ ವಿನೂತನವಾಗಿ ಪ್ರತಿಭಟನೆಯನ್ನು ನಡೆಸಲಾಯಿತು.
ಮಾಜಿ ನಗರ ಸೇವಕ ವಿನಾಯಕ ಗುಂಜಟಕರ ಅವರು, ನಾಲ್ಕನೇ ಗೇಟ್’ನಲ್ಲಿ ಕೆಳಸೇತುವೆ ನಿರ್ಮಿಸುವ ಉದ್ಧೇಶದಿಂದ ಅಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದು, ಇದರಿಂದಾಗಿ ಮೂರನೇ ಗೇಟ್’ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಮೂರನೇ ರೇಲ್ವೆ ಮೇಲ್ಸೇತುವೆ ಹದಗೆಟ್ಟು ಹೋಗುತ್ತಿದ್ದು, ಗುಂಡಿಗಳು ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಅದರಲ್ಲಿ ನೀರು ತುಂಬಿಕೊಂಡು ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ. 2-3 ದಿನಗಳಲ್ಲಿ ಈ ರಸ್ತೆಯನ್ನು ಅಭಿವೃದ್ದಿಗೊಳಿಸದಿದ್ದರೇ, ತೀವ್ರ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗುವುದು. ಇದರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೇ, ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದರು.
ನಾಲ್ಕನೇ ಗೇಟ್’ನಲ್ಲಿ ಕೆಳಸೇತುವೆ ನಿರ್ಮಾಣದಿಂದಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಆದರೇ, ಇನ್ನೊಂದೆಡೆ ಇದರಿಂದಾಗಿ ಮೂರನೇ ರೇಲ್ವೆ ಗೇಟ್’ನಲ್ಲಿ ಜನದಟ್ಟಣೆ ಹೆಚ್ಚಾಗಿ ರಸ್ತೆ ಹದಗೆಟ್ಟು ಹೋಗಿದೆ. ಸಂಬಂಧಿಸಿದ ಇಲಾಖೆಯವರು ಈ ರಸ್ತೆಯನ್ನು ಅಭಿವೃದ್ಧಿಪಡಿಸಿ ಅನಾಹುತಗಳನ್ನು ತಪ್ಪಿಸಬೇಕೆಂದು ಈ ಮಾರ್ಗವಾಗಿ ಪ್ರತಿದಿನ ಉದ್ಯಮಬಾಗಕ್ಕೆ ಸಂಚರಿಸುವ ಜನರು ಆಗ್ರಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಸಾಮಾಜಿಕ ಹೋರಾಟಗಾರರು ಮತ್ತು ನಾಗರೀಕರು ಭಾಗಿಯಾಗಿದ್ದರು.