ಸವದತ್ತಿ ತಾಲ್ಲೂಕಿನ ಉಗರಗೋಳ ಹಾಗೂ ಚಿಕ್ಕುಂಬಿ ಗ್ರಾಮಗಳಲ್ಲಿ ಮೊಹರಂ ಅನ್ನು ಶ್ರದ್ಧಾ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಮುಸ್ಲಿಂ ಬಾಂಧವರು ಸಾಂಪ್ರದಾಯಿಕವಾಗಿ ಪಂಜಾಗಳ ಮೆರವಣಿಗೆಯನ್ನು ನಡೆಸಿದರೆ, ಮಕ್ಕಳ ಕಲಾತ್ಮಕ ನೃತ್ಯಗಳು ಗ್ರಾಮಸ್ಥರ ಗಮನ ಸೆಳೆಯುವಂತಾಗಿತ್ತು.
ಉಗರಗೋಳ ಗ್ರಾಮದಲ್ಲಿ ಆರು ಮಸೀದಿಗಳಲ್ಲಿ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಡೋಲಿಗಳ ಮೆರವಣಿಗೆಯ ಮೂಲಕ ಅವುಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹರಿದಾಡಿಸಲಾಯಿತು. ಮೆರವಣಿಗೆ ಮಾರ್ಗವು ರಂಗೋಲಿ ಮತ್ತು ಹೂವಿನಿಂದ ಅಲಂಕೃತಗೊಂಡಿತ್ತು. ಮಕ್ಕಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಧರಿಸಿ, ಅಂಬ್ರೆಲ್ ಡ್ಯಾನ್ಸ್ ಮೂಲಕ ಮೆರವಣಿಗೆಗೆ ಹೆಚ್ಚಿನ ಆಕರ್ಷಣೆ ನೀಡಿದರು. ಕೆಲವರು ನಟ ಅಪ್ಪು (ಪುನೀತ್ ರಾಜ್‌ಕುಮಾರ್) ಭಾವಚಿತ್ರವಿರುವ ಟೀ ಶರ್ಟ್‌ಗಳನ್ನು ಧರಿಸಿ ಕುಣಿದು ಕುಪ್ಪಳಿಸಿದರು.
ಚಿಕ್ಕುಂಬಿಯಲ್ಲಿಯೂ ಇಬ್ಬರು ಮಸೀದಿಗಳಲ್ಲಿ ಪಂಜಾಗಳ ಮೆರವಣಿಗೆಯು ಜರುಗಿತು. ಎಲ್ಲೆಲ್ಲಿಯೂ ಶಾಂತಿ, ಸೌಹಾರ್ದತೆ ಮತ್ತು ಧಾರ್ಮಿಕ ಸಹಿಷ್ಣುತೆಯ ಹಬ್ಬವೆಂಬಂತೆ ಮೊಹರಂ ಉತ್ಸವ ಕಂಡುಬಂದಿತು.