ಅನೇಕ ವರ್ಷಗಳಿಂದ ಅರಣ್ಯ ಭೂಮಿ ಸಾಗುವಳಿ ಮಾಡಿ ಕೃಷಿ ಮಾಡುತ್ತ ಬಂದಿರುವ ದಲಿತ ಸಮುದಾಯದವರಿಗೆ ಆ ಭೂಮಿ ಸಕ್ರಮಗೊಳಿಸುವಂತೆ ಆಗ್ರಹಿಸಿ, ಧಾರವಾಡದಲ್ಲಿ ಬೀದಿಗೆ ಇಳಿದರು ಸಾಗುವಳಿ ಮಾಡಿದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿ ಬಳಿಕ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲೆಯಲ್ಲಿ ಅನೇಕ ದಲಿತ ಕುಟುಂಬಗಳು ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಬಹಳ ವರ್ಷಗಳಿಂದಲೂ ಅರಣ್ಯ ಭೂಮಿ ಸಾಗುವಳಿ ಮಾಡುತ್ತ ಬಂದಿವೆ. ಆ ಕುಟುಂಬಗಳಿಗೆ ಸಾಗುವಳಿ ಚೀಟಿ ಸಿಗದೇ ನಿರಾಶೆಯಿಂದ ಬದುಕು ನಡೆಸುತ್ತಿದ್ದಾರೆ. ಆದ್ದರಿಂದ ಸಾಗುವಳಿದಾರರಿಗೆ ಪಟ್ಟಾ ನೀಡಬೇಕು.
ಜಿಲ್ಲೆಯ ಅನೇಕ ಪಿಟಿಸಿಎಲ್ ಪ್ರಕರಣಗಳು ಆದೇಶ ಆಗದೇ ಪೆಂಡಿಂಗ್ ಇದ್ದು ತಕ್ಷಣ ಅವುಗಳನ್ನು ಇತ್ಯರ್ಥಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜತೆಗೆ ಹುಬ್ಬಳ್ಳಿ ತಾಲೂಕಿನ ಬಮ್ಮಸಮುದ್ರ ಗ್ರಾಮದ ಸರ್ವೆ ನಂಬರ್ 120/2, 121 ಹಾಗೂ 122ರಲ್ಲಿ ಕಳೆದ 40 ವರ್ಷಗಳಿಂದ ಸರ್ಕಾರಿ ಜಮೀನನ್ನು ಸಾಗುವಳಿ ಮಾಡುತ್ತಿದ್ದು, ತಕ್ಷಣ ಆ ದಲಿತ ಕುಟುಂಬಗಳಿಗೆ ಸಾಗುವಳಿ ಚೀಟಿ ನೀಡಿ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.