ಫೇಸ್ ಕ್ಯಾಪ್ಚರ್ ಕೂಡಲೇ ನಿಲ್ಲಿಸಿ…ಕಳಪೆ ಮಟ್ಟದ ಆಹಾರ ನೀಡದಿರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪ್ರತಿಭಟನೆಯನ್ನು ನಡೆಸಿದರು.ಅಖಿಲ ಭಾರತ ಅಂಗನವಾಡಿ ನೌಕರರ ಫೆಡರೇಷನ್’ನ ಕರೆಯಂತೆ ಇಂದು ದೇಶದ ಎಲ್ಲ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ನಡೆಸುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಎದುರು ಪ್ರತಿಭಟನೆಯನ್ನು ನಡೆಸಿದರು.
.ಕಾರ್ಮಿಕರ ಹಿತಕ್ಕೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆದು ಈ ಹಿಂದೆ ಇದ್ದಂತಹ ಕಾರ್ಮಿಕರ ಪರವಾದ ಎಲ್ಲಾ ಕಾನೂನುಗಳನ್ನು ಪುನಃ ಸ್ಥಾಪಿಸುವುದು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಏರಿಸಬೇಕು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಗೆ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಮೀಸಲಿರಿಸಿ ಬಿಡುಗಡೆ ಮಾಡಬೇಕು. ಹಾಗೂ ಇಂದಿನ ಬೆಲೆ ಏರಿಕೆಗೆ ಅನುಗುಣವಾಗಿ ಅಪಾರ ದಾನ್ಯದ ಘಟಕ ವೆಚ್ಚವನ್ನು ಹೆಚ್ಚಿಸಬೇಕು. ಗೌರವ ಸೇವೆಯನ್ನು ನಾಗರೀಕ ಸೇವೆಯಾಗಿ ಪರಿಗಣಿಸಿ, ಸಿ ಮತ್ತು ಡಿ ಗ್ರೂಪ್’ಗೆ ಸೇರಿಸಬೇಕು. ಎಲ್ಲರಿಗೂ ಇಡಗಂಟು ನೀಡಬೇಕು. ಕಳಪೆಮಟ್ಟದ ಆಹಾರವನ್ನು ನೀಡಲಾಗುತ್ತಿದ್ದು, ಜನರು ಅದನ್ನ ಪಡೆಯದೇ ಹಿಂಜರೆಯುತ್ತಿದ್ದಾರೆ. ಫೇಸ್ ಕ್ಯಾಪ್ಚರ್ ಮಾಡಲು ಹೋದಾಗ ತೊಂದರೆಯಾಗುತ್ತಿದೆ. ಮಾತೃವಂದನಾ ಯೋಜನೆಯ ಹಣವನ್ನು ಸೈಬರ್ ಕಳ್ಳರು ಕದಿಯುತ್ತಿದ್ದಾರೆ ಎಂದು ಆರೋಪಿಸಿದರು.
ನಂತರ ಈ ಕುರಿತಾದ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಾಗೇಶ್ ಸಾತೇರಿ, ವಾಯ್.ಬಿ. ಶೀಗಿಹಳ್ಳಿ, ಮೀನಾಕ್ಷಿ ಕೋಟಗಿ, ಗೀತಾ ಭೋಸಲೆ, ಸವಿತಾ ಡಿಗ್ರೆ, ಮಂಗಲ್ ಪಾಟೀಲ್, ಚಿನ್ನಕ್ಕ ಹೂಲಿಕವಿ, ಮಲಪ್ರಭಾ ಹ್ಯಾಗಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.