ಬೆಳಗಾವಿ: ಗಡಿ ವಿವಾದಿತ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಜಾರಿ ನೀತಿಯನ್ನು ಪ್ರಶ್ನಿಸಬೇಕೆಂದು ಆಗ್ರಹಿಸಿ ಬೆಳಗಾವಿಯ ಮರಾಠಿ ಭಾಷಿಕ ನಗರಸೇವಕ ರವಿ ಸಾಳುಂಕೆ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಬೆಳಗಾವಿ ಗಡಿವಿವಾದದಲ್ಲಿರುವಾಗಲೂ ಕನ್ನಡ ಕಡ್ಡಾಯವನ್ನು ಜಾರಿಗೊಳಿಸಿ ಮರಾಠಿ ಭಾಷಿಕರಿಗೆ ತೊಂದರೆ ನೀಡುವ ಕೆಲಸವನ್ನು ಮಾಡಲಾಗುತ್ತಿದೆ. ಇದನ್ನ ಪ್ರಶ್ನಿಸಿದ ಮರಾಠಿ ನಗರಸೇವಕರನ್ನು ಗಡಿಪಾರು ಮಾಡುವಂತೆ ಕೆಲ ಸಂಘಟನೆಗಳು ಆಗ್ರಹಿಸುತ್ತಿವೆ. ಗಡಿ ವಿವಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿಯಿರುವಾಗ ಯಥಾಸ್ಥಿತಿ ಕಾಯದೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. ಮರಾಠಿ ಭಾಷಿಕ ಪ್ರದೇಶಗಳಲ್ಲಿಯೂ ಒತ್ತಾಯಪೂರ್ವಕವಾಗಿ ಕನ್ನಡಿಕರಣ ಮಾಡಲಾಗುತ್ತಿದೆ. ಗಣೇಶೋತ್ಸವದ ಫಲಕಗಳನ್ನು ಕೂಡ ತೆರುವುಗೊಳಿಸುವ ಕಾರ್ಯ ಮಹಾಪಾಲಿಕೆ ಮಾಡುತ್ತಿದೆ. ಮಹಾನಗರ ಪಾಲಿಕೆಯಲ್ಲಿ ಮೂರು ಭಾಷೆಗಳಲ್ಲಿದ್ದ ಫಲಕಗಳನ್ನು ಮತ್ತು ಮಹಾಪೌರ ಉಪಮಹಾಪೌರ , ಆಯುಕ್ತರ ವಾಹನಗಳ ಫಲಕಗಳನ್ನು ಕೂಡ ಕೇವಲ ಕನ್ನಡದಲ್ಲಿ ಹಾಕಿ ನಂಬರ್ ಪ್ಲೇಟ್ ಕೂಡ ಕನ್ನಡದಲ್ಲಿ ಬಳಸಲಾಗಿದೆ. ಕೂಡಲೇ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಈ ನಿರ್ಣಯದ ಕುರಿತು ಪ್ರಶ್ನೆಯನ್ನೆತ್ತಬೇಕೆಂದು ನಗರಸೇವಕ ರವಿ ಸಾಳುಂಕೆ ಆಗ್ರಹಿಸಿದ್ದಾರೆ.