ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಅಶಾಂತಿ ಆವರಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಶಾಂತಿ ಮತ್ತು ಸೌಹಾರ್ದತೆಯ ಅಗತ್ಯವಿದ್ದು, ಸಮಾಜದಲ್ಲಿ ಪರಿವರ್ತನೆ ತರುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬೆಳಗಾವಿ ವಿಭಾಗದ ಮುಖ್ಯಸ್ಥೆ ರಾಜಯೋಗಿನಿ ಅಂಬಿಕಾ ಬಿ,ಕೆ ಅವರು ಹೇಳಿದರು.
ಮಂಗಳವಾರ ಅನಗೋಳದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಾಂತಿ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲೆಡೆ ಆರಾಜಕತೆ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ದೋಷಗಳನ್ನು ದೂರ ಸರಿಸಿ, ಭಕ್ತಿ ಮಾರ್ಗದಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಪ್ರತಿಯೊಬ್ಬರೂ ತಮ್ಮ ಅಸ್ತಿತ್ವವನ್ನು ಅರಿಯಲು ಪ್ರಯತ್ನಿಸಬೇಕು. ಇದರಿಂದ ಪ್ರತಿಯೊಬ್ಬರಿಗೂ ಜೀವನದಲ್ಲಿ ಶಾಂತಿ ಮತ್ತು ಸೌಹಾರ್ದತೆ, ನೆಮ್ಮದಿ ದೊರೆಯುತ್ತದೆ. ಈ ಎಲ್ಲದರಲ್ಲಿ ಶಾಂತಿ, ಸೌಹಾರ್ದತೆ ಮತ್ತು ಏಕತೆಯನ್ನು ಸಮಾಜದಲ್ಲಿ ನಿರ್ಮಿಸಲು ಮಾಧ್ಯಮಗಳ ಜವಾಬ್ದಾರಿ ಬಹಳ ಪ್ರಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾ ಬಿ,ಕೆ ಮಾತನಾಡಿ, ಆಧುನಿಕ ತಂತ್ರಜ್ಞಾನದಿಂದ ಜಗತ್ತು ಸಣ್ಣದಾಗಿದೆ. ಆದರೆ ಮನುಷ್ಯ-ಮನುಷ್ಯರ ಮಧ್ಯೆ ದೂರ ಹೆಚ್ಚಾಗಿದೆ. ಇಂದಿನ ಜಗತ್ತು ಮಾಧ್ಯಮಗಳ ಮೇಲೆ ಅವಲಂಬಿತವಾಗಿದೆ. ಮಾಧ್ಯಮಗಳ ಪ್ರಭಾವವು ಬಹಳಷ್ಟಾಗಿದೆ. ಈ ಕಾರಣದಿಂದಾಗಿ ಮಾಧ್ಯಮಗಳ ಜವಾಬ್ದಾರಿ ಕೂಡಾ ಹೆಚ್ಚಾಗಿದೆ. ಮಾಧ್ಯಮಗಳು ಸಮಾಜದಲ್ಲಿ ಆಧ್ಯಾತ್ಮಿಕ ನಂಬಿಕೆಯನ್ನು ಬಲಪಡಿಸಬೇಕು. ಇದರಿಂದ ಶಾಂತಿ ಮತ್ತು ಸೌಹಾರ್ದತೆ ನಿರ್ಮಾಣವಾಗುತ್ತದೆ ಎಂದರು.
ಭಾರತೀಯ ಶ್ರಮಜೀವಿ ಪತ್ರಕರ್ತ ಸಂಘದ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ ಕಾಕತಿಕರ್, ಜಿಲ್ಲಾ ಮರಾಠಿ ಪತ್ರಕರ್ತ ಸಂಘದ ಅಧ್ಯಕ್ಷ ಕೃಷ್ಣ ಶಹಾಪೂರಕರ್, ಸ್ಮಾರ್ಟ್ ನ್ಯೂಸ್ನ ಸಂಪಾದಕ ಉಪೇಂದ್ರ ಬಾಜಿಕರ್ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವೇದಿಕೆಯ ಮೇಲಿದ್ದ ಮಹಣಿಯರ ಕೈಯಿಂದ ದೀಪ ಪ್ರಜ್ವಲನ ನಡೆಯಿತು. ಶಿವಾನಂದ ಬಿ,ಕೆ ಸ್ವಾಗತಿಸಿದರು. ಶೋಭಾ ಬಿ,ಕೆ
ಅವರು ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಅನಿತಾ ಬಿ,ಕೆ ಅವರು ರಾಜಯೋಗದ ಬಗ್ಗೆ ಮಾಹಿತಿ ನೀಡಿದರು. ರೂಪಾ ಬಿ,ಕೆ ಅವರು ಕಾರ್ಯಕ್ರಮ ನಿರೂಪಿಸಿದರು. ದತ್ತಾತ್ರಯ ಬಿ,ಕೆ ಅವರು ವಂದಿಸಿದರು. ಶ್ರೀಕಾಂತ ಬಿ,ಕೆ ಸೇರಿದಂತೆ ಮುಂತಾದವರು ಹಾಜರಿದ್ದರು.