ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ರಾಜ್ಯದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿ ಮಾಡಿತ್ತು. ಸರಕಾರ ರೈತರ ಪರವಾಗಿ ಇರಬೇಕು, ರೈತರ ವಿಷಯದಲ್ಲಿ ನಿರ್ಲಕ್ಷ್ಯ ತೋರಿಸಬಾರದು. ಜತೆಗೆ ರೈತರನ್ನು ಗೌರವದಿಂದ ಕಾಣಬೇಕು ಹೀಗೆ, ಹತ್ತು ಹಲವು ಅಂಶಗಳನ್ನು ಇಟ್ಟು ಪ್ರಾರಂಭವಾದ ಹೋರಾಟ ಸಂಚಲನವನ್ನು ನಿರ್ಮಾಣ ಮಾಡಿತ್ತು. ಆದರೆ ಈ ಯೋಜನೆ ಜಾರಿಗೆ ಕೇಂದ್ರ ಬಿಜೆಪಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಆರೋಪಿಸಿದರು.
ನವಲಗುಂದ ಪಟ್ಟಣದ ಲಿಂಗರಾಜ ವೃತ್ತದ ಬಳಿ ಇರುವ ರೈತ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, 45ನೇ ರೈತ ಹುತಾತ್ಮ ದಿನಾಚರಣೆ ವೇದಿಕೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ಕೆಲಸ ಪ್ರಾರಂಭಿಸಿದೆ ಆದರೆ ಕೇಂದ್ರ ಸರ್ಕಾರ ಅರಣ್ಯ ಪರಿಸರ ಇಲಾಖೆಯ ಅನುಮತಿ ನೀಡಿದರೆ ಇದು ಬಹು ಬೇಗನೆ ಈಡೇರುವದು. ಕೇಂದ್ರ ಸರ್ಕಾರ ಮಹದಾಯಿ ಕಳಸಾ ಬಂಡೂರಿ ವಿಷಯದಲ್ಲಿ ನಿರ್ಲಕ್ಷ್ಯತೋರಿಸುತ್ತಿದೆ. ನಮ್ಮ ಹೋರಾಟದ ವಿಷಯದಲ್ಲಿ ರಾಜಕೀಯ ತಾರತಮ್ಯ ಮಾಡುವದನ್ನು ನಿಲ್ಲಿಸಬೇಕು ಎಂದು ಕೇಂದ್ರ ಬಿಜೆಪಿ ವಿರುದ್ಧ ಕಿಡಿಕಾರಿದರು.