ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಮಹಾರಾಷ್ಟ್ರ, ಆಂದ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳು ಸೇರಿದಂತೆ ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಈಕೆಯೇ ಜೀವನಾಡಿಯಾಗಿದ್ದಾಳೆ. ಆದ್ದರಿಂದ ವಿಜಯಪುರ ಬಾಗಲಕೋಟ ಅವಳಿ ಜಿಲ್ಲೆಯ ರೈತರು ಕಳೆದ 19 ವರ್ಷಗಳಿಂದ ಕೃಷ್ಣೆಯ ಉಗಮ ಸ್ಥಾನ ಮಹಾರಾಷ್ಟ್ರದ ಮಹಾಬಳೇಶ್ವರದಲ್ಲಿ ಗಂಗಾಪೂಜೆ ಮಾಡಿ ಬಾಗಿನ ಅರ್ಪಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.
ಹೌದು, ಮೂರು ರಾಜ್ಯಗಳು ಹಾಗೂವಉತ್ತರ ಕರ್ನಾಟಕ ಜೀವನಾಡಿ ಕೃಷ್ಣಾ ನದಿಯ ಉಗಮಸ್ಥಾನವಾದ ನೆರೆ ರಾಜ್ಯ ಮಹಾರಾಷ್ಟ್ರ ರಾಜ್ಯದ ಸಾತಾರಾ ಜಿಲ್ಲೆಯ ಮಹಾಬಳೇಶ್ವರ ಪಂಚಗಂಗಾ ದೇವಸ್ಥಾನಕ್ಕೆ ತೆರಳಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಅನ್ನದಾತರು ಮಾಜಿ ಸಚಿವ ಸಂಗಣ್ಣ ಕೆ ಬೆಳ್ಳುಬ್ಬಿ ನೇತೃತ್ವದಲ್ಲಿ 19 ನೇ ವರ್ಷದ ಗಂಗಾಪೂಜೆ ಸಲ್ಲಿಸಿ ಕೃಷ್ಣೆಗೆ ಬಾಗಿನ ಅರ್ಪಿಸಿದರು. ಮುಂಗಾರು ಆರಂಭ ವಾಗುವದರೊಂದಿಗೆ ಬರುವ ಕಡ್ಲೀಗರ ಪೂರ್ಣಿಮೆಯಂದೂ ಈ ಭಾಗದ ನೂರಾರು ಮಣ್ಣಿನ ಮಕ್ಕಳು ಮಹಾಬಳೇಶ್ವರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಹಲವರು ವಿಶೇಷ ಪೂಜೆ ಸಲ್ಲಿಸಿ ಕೃಷ್ಣೆಯ ಕೃಪೆ ರೈತರ ಮೇಲಿರಲಿ. ಕಾಲಕಾಲಕ್ಕೆ ಸರಿಯಾಗಿ ಹರಿದು ಬದುಕು ಬಂಗಾರ ಮಾಡು ಎಂದು ಪ್ರಾರ್ಥಿಸಿದರು. ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಮಹಾಬಳೇಶ್ವರದ ಪಂಚಗಂಗಾ ಸ್ಥಳದಲ್ಲಿ ಹುಟ್ಟುವ ಕೃಷ್ಣಾ ನದಿ ಕೇವಲ ಮಹಾರಾಷ್ಟ್ರ ಮಾತ್ರವಲ್ಲ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜನರಿಗೆ ನೀರುಣಿಸುತ್ತಾಳೆ.
ಇನ್ನೂ ಕೃಷ್ಣಾ ನದಿ ಹುಟ್ಟುವ ಪಂಚಗಂಗೆ ಕ್ಷೇತ್ರ ಐದು ನದಿಗಳ ಉಗಮ ಸ್ಥಾನ ವಾಗಿರುವುದು ಮತ್ತೊಂದು ವಿಶೇಷ. ಗಾಯತ್ರಿ, ಸಾವಿತ್ರಿ, ಕೋಯ್ನಾ, ವೆನ್ನಾ ಮತ್ತು ಕೃಷ್ಣಾ ನದಿಗಳ ಸಂಗಮಸ್ಥಳವೂ ಹೌದು. ಇಲ್ಲಿ ಪಂಚಗಂಗಾ ದೇವಸ್ಥಾನ ನಿರ್ಮಿಸಲಾಗಿದ್ದು, ಈ ದೇವಾಲಯದಲ್ಲಿರುವ ಗೋವಿನ ಮೂರ್ತಿಯ ವಾಯಿಯಿಂದ ಎಲ್ಲ ನದಿಗಳು ಉಗಮವಾಗುತ್ತವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಪಂಚಗಂಗಾ ಎಂದು ಕರೆಯಲಾಗುತ್ತದೆ. ಇಲ್ಲಿಯೇ ಜನುಮ ತಾಳುವ ಕೃಷ್ಣೆಗೆ ಬಾಗೀನ ಅರ್ಪಿಸಿ ಕೃತಜ್ಞತೆ ಸಲ್ಲಿಸಿದರು. ಇನ್ನೂ ಈ ಉಗಮಸ್ಥಾನದ ಮಹತ್ವ ಅರಿತಿರುವ ಮಾಜಿ ಸಚಿವ ಸಂಗಣ್ಣ ಕೆ ಬೆಳ್ಳುಬ್ಬಿ ತಾವು ಶಾಸಕರಾಗಿದ್ದಾಗ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ರೈತರು ಹಾಗೂ ಮುತ್ತೈದೆಯರೊಂದಿಗೆ ನೇರವೇರಿಸುತ್ತಾ ಬಂದಿದ್ದಾರೆ. ಕನಿಷ್ಠ ಪಕ್ಷ ಎರಡು ನೂರಕ್ಕೂ ಹೆಚ್ಚು ಜನರಿಗೆ ವಸತಿ ಊಟದ ವೆಚ್ಚವನ್ನು ಬೆಳ್ಳುಬ್ಬಿಯವರೇ ನೋಡಿಕೊಂಡು ಪ್ರತಿ ವರ್ಷ ಕಡ್ಲೀಗರ ಪೂರ್ಣಿಮೆ ಯಂದು ಪಂಚಗಂಗಾ ದೇವಸ್ಥಾನಕ್ಕೆ ತೆರಳಿ ಗಂಗಾಪೂಜೆ ಸಲ್ಲಿಸಿ ಬಾಗೀನ ಅರ್ಪಿಸುವ ಸಂಪ್ರದಾಯ ಪಾಲಿಸುತ್ತ ಬಂದಿದ್ದಾರೆ.
ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ನೇತೃತ್ವದಲ್ಲಿ ಬಾಗಲಕೋಟ ರೈತರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೃಷ್ಣಾ ಮಾತೆಗೆ ಜೈಕಾರ ಹಾಕಿದ್ದಾರೆ. ಒಟ್ನಲ್ಲಿ ಮಹಾರಾಷ್ಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ದಾರಾಕಾರವಾಗಿ ಸುರಿಯುತ್ತಿರುವ ಮಳೆಯ ಮಧ್ಯೆಯೂ ಸಂಪ್ರದಾಯವನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಜನತೆ ಮುಂದುವರಿಸಿದ್ದಾರೆ. ತಮ್ಮನ್ನು ಹರಸುವ ಕೃಷ್ಣಾ ಮಾತೆಗೆ ಕೃತಜ್ಞತೆ ಸಲ್ಲಿಸಿ ರೈತ ಎಂದಿಗೂ ಉಪಕಾರ ಸ್ಮರಣೀಯ ಎಂದು ತೋರಿಸಿಕೊಟ್ಟಿದ್ದಾರೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.