ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿ ಗ್ರಾಮದಲ್ಲಿ ಘಟನೆ ನಡೆದಿದೆ. ಮಹೀಷವಾಡಗಿ ಗ್ರಾಮದ ನಿವಾಸಿ ಹಾಗೂ ಶ್ರೀ ಪದ್ಮಾವತಿ ಇಂಟರ್ನ್ಯಾಷನಲ್ ಶಾಲೆಯ ಮಾಲೀಕರಾದ ಡಾ. ಆನಂದ ಉಪಾಧ್ಯಾಯ ಅವರನ್ನು ಜುಲೈ 10 ರಂದು ಶಾಲಾ ಕ್ಯಾಂಪ್ನಿಂದ ಅಪಹರಿಸಿ, ಸುಮಾರು ಎರಡು ಗಂಟೆಗಳ ಕಾಲ ಭೀಕರ ಹಲ್ಲೆ ನಡೆಸಲಾಗಿದೆ.
ಹಲ್ಲೆಗೊಳಗಾದ ಡಾ. ಆನಂದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಈವರೆಗೆ ಯಾವುದೇ ಆರೋಪಿಗಳನ್ನು ಬಂಧಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 2018ರಲ್ಲಿ ತೇಲಿ ಕುಟುಂಬದೊಂದಿಗೆ ಸೇರಿ ಶಾಲೆ ಆರಂಭಿಸಿದ್ದ ಡಾ. ಆನಂದ ಅವರು ನಂತರ ಹಣಕಾಸಿನ ವಿಚಾರದಲ್ಲಿ ಬಿರುಕು ಬಿದ್ದ ಹಿನ್ನೆಲೆಯಲ್ಲಿ, ತೇಲಿ ಕುಟುಂಬದವರಿಗೆ 1 ಕೋಟಿ 80 ಲಕ್ಷ ರೂ. ನೀಡಿ ಶಿಕ್ಷಣ ಸಂಸ್ಥೆಯಿಂದ ಹೊರ ಹಾಕಿದ್ದರು. ಈ ಸಂಬಂಧ ಹೈಕೋರ್ಟ್ನಲ್ಲಿ ಈಗಾಗಲೇ ಪ್ರಕರಣ ಮುಂದುವರಿದಿದೆ.ಕಿಡ್ನಾಪ್ ಆದ ಕ್ಷಣದಿಂದಲೇ ಡಾ. ಆನಂದ ಅವರ ಕುಟುಂಬ ಅಥಣಿ ಪೊಲೀಸರ ಗಮನಕ್ಕೆ ತಂದಿದ್ದರೂ, ಆರೋಪಿಗಳ ಬಂಧನದಲ್ಲಿ ವಿಳಂಬವಾಗುತ್ತಿರುವುದರಿಂದ ಸ್ಥಳೀಯರಲ್ಲಿ ನಂಬಿಕೆಯು ಕುಸಿದಂತಾಗಿದೆ.