ನಾನು ಯಾವ ಜಿಲ್ಲೆಗೆ ಹೋಗಬಾರದು ಎಂದು ಸಿಎಂ ಸಿದ್ದರಾಮಯ್ಯ ಪಟ್ಟಿ ಮಾಡುತ್ತಿದ್ದಾರೆ. ನನ್ನ ವಿರುದ್ಧ ಸಿದ್ದರಾಮಯ್ಯ ಏನ್ ಮಾಡಿದ್ರು ಪ್ರಯೋಜನವಿಲ್ಲಾ, ನಿಮಗೇ ಏನ್ ಬೇಕೋ ಅದು ಮಾಡಿಕೊಳ್ಳಿ ನಾನು ಮಾಡಬೇಕಾದನ್ನ ಮಾಡ್ತೇನೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ವಿಜಯಪುರ ನಗರದ ಸಾಯಿ ವಿಹಾರ ಮಂಗಲ ಕಾರ್ಯಾಲಯದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ವತಿಯಿಂದ ಸೋಮವಾರ ಸಾಯಂಕಾಲ ಹಮ್ಮಿಕೊಂಡ “ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್: ಕರಾಳ ಇತಿಹಾಸಕ್ಕೆ 50 ವರ್ಷ” ಚಿಂತಕ ಚಕ್ರವರ್ತಿ ಸೂಲಿಬೆಲೆ ಉಪನ್ಯಾಸ ನೀಡಿದ ಚಕ್ರವರ್ತಿ ಸೂಲಿಬೆಲೆ ರಾಹುಲ್ ಗಾಂಧಿ ತೋರಿಸುವ ಪುಸ್ತಕದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಬಗ್ಗೆ ಇದೆ, ಸಂವಿಧಾನವನ್ನ ತಿದ್ದುಪಡಿ ಮಾಡಿರುವ ಪಕ್ಷವೇ ಕಾಂಗ್ರೆಸ್ ಎಂದರು. ನಾನು ರಾಜಕೀಯ ಕಾರ್ಯಕರ್ತನಲ್ಲ ಆದ್ರೆ ಮೋದಿ ಕೆಲಸಗಳನ್ನ ಮೆಚ್ಚಿದ್ದೇನೆ. ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಚಕ್ರವರ್ತಿ ಸೂಲಿಬೆಲಿ ಕಾಂಗ್ರೆಸ್ ಯುವ ಘಟಕದವರು ನನ್ನನ್ನು ಜಿಲ್ಲೆಗಳಲ್ಲಿ ಬಿಡಬಾರದು ಹೇಳ್ತಾರೆ. ಸಂವಿಧಾನದಲ್ಲೇ ನಮಗೆ ಸ್ವಾತಂತ್ರ್ಯ ನೀಡಲಾಗಿದೆ.
ಸಿದ್ದರಾಮಯ್ಯ ಸರ್ಕಾರ ನಮ್ಮನ್ನು ತಡೆಯೋಕೆ ಸಾಧ್ಯವಿಲ್ಲಾ, ನಾನು ಯಾವುದೇ ಕೋಮುಭಾಷಣ ಮಾಡಿಲ್ಲ. ಎಲ್ಲಿಯೂ ಗಲಾಟೆ ಆಗಿಲ್ಲಾ, ಆದ್ರೂ ನನ್ನ ವಿರುದ್ಧ ಪೊಲೀಸರನ್ನ ಬಿಟ್ಟರೆ ಏನು ಪ್ರಯೋಜನವಿಲ್ಲಾ, ಸಚಿವ ಪ್ರಿಯಾಂಕ್ ಖರ್ಗೆ ನಾನು ಕಲಬುರ್ಗಿಗೆ ಬರದಂತೆ ತಡೆಯುವ ಕೆಲಸ ಮಾಡಿದರು. ಪೊಲೀಸರ ಮೂಲಕ ರಾತ್ರಿ 11 ಕ್ಕೆ ಕಲಬುರ್ಗಿ ಪ್ರವೇಶ ಮಾಡದಂತೆ ತಡೆಯೋ ಕೆಲಸ ಮಾಡಿದರು. ಆದರೆ ಕಾನೂನಿನ ಮೂಲಕ ಅವರಿಗೆ ಸರಿಯಾದ ಉತ್ತರ ಕೊಟ್ಟೆ ಎಂದರು. ತುರ್ತು ಪರಿಸ್ಥಿತಿ ಅನ್ನೋದು ಭಾರತದ ದೃಷ್ಟಿಯಿಂದ ಕರಾಳ ದಿನವಾಗಿದೆ. ಅಂಬೇಡ್ಕರ್ ಅವರು ನಮಗೆಲ್ಲ ಕೊಟ್ಟ ಸಂವಿಧಾನವನ್ನು ಗಾಳಿಗೆ ತೂರಿ ಎಮರ್ಜೆನ್ಸಿ ಜಾರಿಗೆ ತರಲಾಯಿತು. ತುರ್ತು ಪರಿಸ್ಥಿತಿ ಜಾರಿಗೆ ತಂದ ನಂತರ ಸಂವಿಧಾನವನ್ನು ಹಳಿಯುವಂತಹ ಕೆಲಸವಾಯಿತು.
ಸಂವಿಧಾನವನ್ನು ಸಮಾಧಿ ಮಾಡುವಂತಹ ಕೆಲಸ ಇಂದಿರಾ ಗಾಂಧಿ ಮಾಡಿದ್ದಾರೆ. ಸಂವಿಧಾನಕ್ಕೆ ತಂದ 42ನೇ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದೇ ಕರೆಯಲಾಗುತ್ತದೆ. ಅಂಬೇಡ್ಕರ್ ಅವರಿಗೆ ಆಪ್ತವಾದಂತಹ ಮೂಲಭೂತ ಹಕ್ಕುಗಳನ್ನು ಕಸಿಯುವಂತಹ, ಸಮಾಜದ ಜನರ ಮೂಲಹಕ್ಕುಗಳನ್ನು ರಾಷ್ಟ್ರಪತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಇಂತಹ ಎಲ್ಲ ಪ್ರಯತ್ನ ಮಾಡಿದಂತಹ ಇಂದಿರಾಗಾಂಧಿ ಅವರ ಕೆಲಸವನ್ನು ಸಮಾಜಕ್ಕೆ ತಲುಪಿಸುವಂತಹ ಕೆಲಸ ಆಗಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದವರಿಗೆ ಸನ್ಮಾನಿಸಲಾಯಿತು.