ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮವನ್ನು ಗುಂಡೇನಟ್ಟಿ, ಬೇಡರಟ್ಟಿ ಹಾಗೂ ಹಿರೇ ಅಂಗರೊಳ್ಳಿಯಿಂದ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪ್ರಾಣಭಯದಲ್ಲೇ ಜನರು ಸಂಚಾರ ನಡೆಸುತ್ತಿದ್ದಾರೆ.
ಖಾನಾಪುರ ತಾಲೂಕಿನ ಗಂಧಿಗವಾಡ ಗ್ರಾಮವನ್ನು ಗುಂಡೇನಟ್ಟಿ, ಬೇಡರಟ್ಟಿ ಹಾಗೂ ಹಿರೇ ಅಂಗರೊಳ್ಳಿಯಿಂದ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಅಪಾಯದ ಮಧ್ಯೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಮೇಲೆ ದೊಡ್ಡ ದೊಡ್ಡ ತಗ್ಗು ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ಬಂದಾಗ ನೀರು ನಿಂತು ರಸ್ತೆ ಚರಂಡಿಯಂತಾಗಿ ಬದಲಾಗಿದೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಗಲಿನಲ್ಲಿಯೂ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಿವೆ. ಕೈಕಾಲು ಮುರಿದು ಆಸ್ಪತ್ರೆ ಸೇರಿರುವ ಉದಾಹರಣೆಗಳೇ ಸಾಕಷ್ಟಿವೆ.
ಈ ಕುರಿತು ಕರ್ನಾಟಕ ರಾಜ್ಯ ಗಡಿನಾಡು ಹಿತರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಂ.ಎಂ. ರಾಜೀಬಾಯಿ ಮಾತನಾಡಿ, “ಸಂಬಂಧಪಟ್ಟ ಇಲಾಖೆ ಈ ಕಡೆಗೆ ತಕ್ಷಣ ಗಮನಹರಿಸಿ ರಸ್ತೆ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು. ಜೊತೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಈ ರಸ್ತೆ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಖಾನಾಪುರ ತಾಲೂಕಿನ ಅತಿ ದೊಡ್ಡ ಗ್ರಾಮವಿರುವ ಗಂಧಿಗವಾಡ 21 ಗ್ರಾಪಂ ಸದಸ್ಯರನ್ನು ಹೊಂದಿದ್ದರೂ, ಜನಪ್ರತಿನಿಧಿಗಳ ನಿರ್ಲಕ್ಷದಿಂದ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಅದೇ ರೀತಿ ಗಡಿನಾಡು ಹಿತರಕ್ಷಣಾ ವೇದಿಕೆಯ ಬಸವರಾಜ್ ಬಂಗಿ, ಮಲ್ಲಪ್ಪ ಗಾಳಿ, ಗೌಸ್ ಬಾಗವಾನ ಮತ್ತು ಶಂಕರ್ ಕುರೇರ ಅವರು ಕೂಡಾ ತಕ್ಷಣದ ದುರಸ್ತಿಗೆ ಆಗ್ರಹಿಸಿದ್ದಾರೆ.