ಹುಕ್ಕೇರಿ : ಬಹು ದಿನಗಳ ನಂತರ ಹುಕ್ಕೇರಿ ನಗರದಲ್ಲಿ ಮಾಜಿ ಸಂಸದ ರಮೇಶ ಕತ್ತಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಸಭೆ ಜರುಗಿತು.
ಇತ್ತಿಚಿಗೆ ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್, ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಅಧಿಕಾರ ಮತ್ತು ಆಡಳಿತ ಕೈತಪ್ಪಿ ಹೋದ ಕೆಲ ತಿಂಗಳುಗಳ ಬಳಿಕ ಮಾಜಿ ಸಂಸದ ರಮೇಶ ಕತ್ತಿ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆ ಜರುಗಿಸಿ ತಮ್ಮ ವಿರೋಧಿಗಳ ವಿರುದ್ಧ ತೊಡೆ ತೊಟ್ಟಲು ಮುಂದಾಗಿದ್ದಾರೆ .
ಶುಕ್ರವಾರ ನಡೆದ ಹುಕ್ಕೇರಿ ತಾಲೂಕು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣ ಮತ್ತು ಸಹಕಾರ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ತಮ್ಮಲ್ಲಿ ಇಷ್ಟು ದಿನದಿಂದ ಅಣ್ಣ ದಿವಂಗತ ಉಮೇಶ ಕತ್ತಿ ಯವರ ಅಗಲಿಕೆ ನೋವನ್ನು ಬಹಿರಂಗವಾಗಿ ಹೊರಹಾಕಿದರು. ಇದರೊಂದಿಗೆ ಬರುವ ಎಲ್ಲ ಚುನಾವಣೆಗಳಲ್ಲಿ ಕಾರ್ಯಕರ್ತರ ಸಹಕಾರದಿಂದ ಹೊರಗಿನವರ ಆಟ ನಡೆಯಲು ಬಿಡುವುದಿಲ್ಲ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಸಂದೇಶ ರವಾನಿಸಿದರು.
ತಾಲೂಕಿನ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ,ವಿದ್ಯುತ್ ಸಹಕಾರಿ ಸಂಘ ಮತ್ತು ಪ್ರಾಥಮಿಕ ಸಹಕಾರಿ ಸಂಘಗಳಲ್ಲಿ ಕೆಲ ನಿರ್ದೇಶಕರು ತಮ್ಮ ಸ್ವಾರ್ಥಕ್ಕಾಗಿ ವಿವಿಧ ಆಮಿಷಗಳಿಗೆ ಒಳಗಾಗಿ ವಿರೋಧಿ ಪಾಳಯಕ್ಕೆ ಹಾರಿದ್ದಾರೆ. ಇಂಥ ನಿರ್ದೇಶಕರು ಕತ್ತಿ ಕುಟುಂಬ ಮತ್ತು ಕ್ಷೇತ್ರದ ಜನರಿಗೆ ನಂಬಿಕೆ ದ್ರೋಹ ಎಸಗಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲು ಕ್ಷೇತ್ರದ ಜನತೆ ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.
ಕ್ಷೇತ್ರದಲ್ಲಿ ಕತ್ತಿ ಕುಟುಂಬದ ವಿರುದ್ಧ ಹೊರಗಿನವರು ಬಂದು ಇಲ್ಲಸಲ್ಲದ ಅಪಪ್ರಚಾರ ನಡೆಸಿ ಗೊಂದಲ ಸೃಷ್ಟಿಸುತ್ತಿದ್ದು ಇಲ್ಲಿನ ಜನತೆ ಇಂಥ ವದಂತಿಗಳಿಗೆ ಕಿವಿಗೊಡಬಾರದು. ಸಾಕಷ್ಟು ತಂತ್ರ-ಕುತಂತ್ರ ನಡೆಸಿ ಕತ್ತಿ ಕುಟುಂಬ ಒಡೆಯುವ ವಿರೋಧಿಗಳ ಹುನ್ನಾರ ಫಲಿಸದು. ಹೊಂದಾಣಿಕೆ ರಾಜಕಾರಣ ಮಾಡುವುದು ನಮಗೂ ಗೊತ್ತಿದೆ ಎಂದು ವಿರೋಧಿಗಳ ಹೆಸರು ಉಲ್ಲೇಖಿಸದೇ ಅವರು ಗುಡುಗಿದರು.
ವಿದ್ಯುತ್ ಸಹಕಾರಿ ಸಂಘ ಸೇರಿದಂತೆ ಬರುವ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಪಕ್ಷದ ಹಿರಿಯರು ಮತ್ತು ಕಾರ್ಯಕರ್ತರ ಸಹಕಾರದೊಂದಿಗೆ ತಳಮಟ್ಟದಿಂದ ಪಕ್ಷ ಸಂಘಟನೆಗೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಈ ಮೂಲಕ ಅಧಿಕಾರವನ್ನು ಮರಳಿ ಪಡೆಯುವುದು ಶತಸಿದ್ಧ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ನಿಖಿಲ್ ಕತ್ತಿ ಮಾತನಾಡಿ, ಕಳೆದ ಎರಡು ವರ್ಷದ ಅವಧಿಯಲ್ಲಿ ಅನುದಾನದ ಕೊರತೆ ನಡುವೆಯೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಇದರೊಂದಿಗೆ ದಿ.ಉಮೇಶ ಕತ್ತಿ ಅವರ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲಾಗುತ್ತಿದೆ ಎಂದರು.
ಮುಖಂಡರಾದ ಮಹಾವೀರ ನಿಲಜಗಿ, ಗಜಾನನ ಕ್ವಳ್ಳಿ, ಎಸ್.ಎಂ.ಪಾಟೀಲ, ಬಸವರಾಜ ಮಟಗಾರ, ಸತ್ಯಪ್ಪಾ ನಾಯಿಕ, ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ಪ್ರಕಾಶ ಮುತಾಲಿಕ, ರಾಮಚಂದ್ರ ಜೋಶಿ, ಎ.ಕೆ.ಪಾಟೀಲ, ರಾಜು ಮುನ್ನೋಳಿ, ಗುರು ಕುಲಕರ್ಣಿ, ಅಮರ ನೇರ್ಲಿ, ಸಾತಪ್ಪಾ ಕರ್ಕಿನಾಯಿಕ, ರಾಯಪ್ಪಾ ಢೂಗ, ಇಲಿಯಾಸ ಅತ್ತಾರ, ಅಪ್ಪುಶ ತುಬಚಿ, ಸುಹಾಸ ನೂಲಿ, ಪಿಂಟು ಶೆಟ್ಟಿ, ಉದಯ ಹುಕ್ಕೇರಿ, ಮೀರಾಸಾಬ ಮುಲ್ತಾನಿ, ಬಸವರಾಜ ಗಂಗಣ್ಣವರ, ಶಿವನಗೌಡ ಪಾಟೀಲ, ಶೀತಲ ಬ್ಯಾಳಿ, ಸುಚಿತ ಪಾಟೀಲ, ಮತ್ತಿತರರು ಉಪಸ್ಥಿತರಿದ್ದರು.
ತೀವೃ ಕೂತುಹಲ ಕೆರಳಿಸಿದ ಬಿಜೆಪಿಯ ಈ ಆತ್ಮಾವಲೋಕನ ಸಭೆಯಲ್ಲಿ ಪಕ್ಷದ ಪ್ರಮುಖರು ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದ್ದರು.
ರಾಜು ಬಾಗಲಕೋಟಿ
ಇನ್ ನ್ಯೂಜ ಹುಕ್ಕೇರಿ.