ಬಹುಭಾಷಾ ನಟಿ ಬಿ. ಸರೋಜಾ ದೇವಿ ಸೋಮವಾರದಂದು ತಮ್ಮ 87ರ ಹರೆಯದಲ್ಲಿ ಇಹಲೋಕ ತ್ಯಜಿಸಿದ್ದು, ಇಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಗಳು ನಡೆಯಲಿವೆ. ಸಿಎಂ ಸಿದ್ದರಾಮಯ್ಯ ಅವರಿಂದು ನಟಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಬಿ.ಸರೋಜಾ ದೇವಿ ಅವರ ನಿಧನ ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟುಮಾಡಿದೆ. ಬಹಳ ಚಿಕ್ಕ ವಯಸ್ಸಿನಲ್ಲೇ ಸಿನಿರಂಗ ಪ್ರವೇಶ ಮಾಡಿ, 70ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರಿಗೆ ಅಭಿನಯ ಸರಸ್ವತಿ ಅಂತಾ ಬಿರುದು ಕೊಡಲಾಗಿತ್ತು. ಅವರೋರ್ವ ಮೇರು ನಟಿಯಾಗಿ ಗುರುತಿಸಿಕೊಂಡವರು. ಕನ್ನಡ ಅಷ್ಟೇ ಅಲ್ಲದೇ ತಮಿಳು, ತೆಲುಗು, ಮಲಯಾಳಂ, ಹಿಂದಿಯಲ್ಲೂ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡ ಅದ್ಭುತ ನಟಿ. ಎಲ್ಲಾ ಭಾಷೆಯ ಹೆಸರಾಂತ ನಟರ ಜೊತೆ ತೆರೆಹಂಚಿಕೊಂಡಿದ್ದಾರೆ. ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಎಮ್ಜಿಆರ್, ಎನ್ಟಿಆರ್, ನಾಗೇಶ್ವರ ರಾವ್, ಡಾ.ರಾಜ್ಕುಮಾರ್ ಅವರ ಸಿನಿಮಾಗಳಲ್ಲಿ ನಟಿಸಿದವರು. ತಮ್ಮ ಎಲ್ಲಾ ಪಾತ್ರಕ್ಕೂ ಅತ್ಯುತ್ತಮವಾಗಿ ಜೀವ ತುಂಬುತ್ತಿದ್ರು. ಖಾಸಗಿ ಜೀವನದಲ್ಲೂ ಶಿಸ್ತುಬದ್ಧರಾಗಿದ್ದರು ಎಂದರು.
ಕನ್ನಡ ಚಿತ್ರರಂಗ ಬೆಳವಣಿಗೆಗೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಅವರ ಸಾವಿನಿಂದ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. ಅವತ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ಕೊಡಲಿ ಎಂದು ಭಗವಂತನಲ್ಲಿ ಕೇಳಿಕೊಳ್ಳುತ್ತೇನೆ. ಸರ್ಕಾರದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಗುತ್ತದೆ. ಅವರ ಹುಟ್ಟೂರಲ್ಲಿ ಅಂತಿಮ ಕಾರ್ಯ ನಡೆಸಲಾಗುತ್ತದೆ”. ”ಈ ಹಿಂದೆ ಹಲವು ಸಾರಿ ಅವರನ್ನು ಭೇಟಿಯಾಗಿದ್ದೆ. ಎಲ್ಲಿ ಸಿಕ್ಕರೂ ಬಹಳ ಪ್ರೀತಿಯಿಂದ, ಆತ್ಮೀಯತೆ ಇಂದ ಮಾತನಾಡುತ್ತಿದ್ದರು. ಒಳ್ಳೆಯ ವ್ಯಕ್ತಿತ್ವವುಳ್ಳ ನಟಿಯಾಗಿ ಗುರುತಿಸಿಕೊಂಡವರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಹಲವು ಸಿನಿಮಾಗಳನ್ನು ವೀಕ್ಷಿಸಿದ್ದೇನೆ. ಕಿತ್ತೂರು ಚೆನ್ನಮ್ಮ, ಭಾಗ್ಯವಂತರು, ಬಬ್ರುವಾಹನ ಸೇರಿ ಹಲವು ಸಿನಿಮಾ ಮಾಡಿದ್ದಾರೆ. ರಾಜ್ಕುಮಾರ್ ಮತ್ತು ಅವರದ್ದು ಒಳ್ಳೆಯ ಜೋಡಿ” ಎಂದರು.