ಬೆಳಗಾವಿಯಲ್ಲಿ ಇನ್ ನ್ಯೂಸ್ ಇಂಪ್ಯಾಕ್ಟ್ ಆಗಿದ್ದು, ನಗರದ ಭಡಕಲ್ ಗಲ್ಲಿಯಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಿ, ಜನರಿಗೆ ಓಡಾಡಲೂ ಅನುಕೂಲವಾಗುವಂತೆ ರಸ್ತೆಯನ್ನು ನಿರ್ಮಿಸಲಾಗಿದೆ.

ಬೆಳಗಾವಿಯ ಭಡಕಲ್ ಗಲ್ಲಿಯಲ್ಲಿ ಕಳೆದ ಸುಮಾರು 15 ದಿನಗಳಿಂದ ಡ್ರೈನೇಜ್ ಪೈಪಲೈನ್ ಅಳವಡಿಸುವ ಕಾಮಗಾರಿ ಆಮೆಗತಿಯಲ್ಲಿ ನಡೆದಿತ್ತು. ಇದರಿಂದಾಗಿ ಜನರಿಗೆ ಓಡಾಡಲೂ ತೊಂದರೆಯಾಗುತ್ತಿತ್ತು. ಅಗೆದ ಉದ್ದನೆಯ ಆಳವಾದ ತಗ್ಗಿನಿಂದ ಸ್ಥಳೀಯರು ಪೇಚಿಗೆ ಸಿಲುಕಿದ್ದರು.

ಹಲವಾರು ಬಾರಿ ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ಕ್ಯಾರೆ ಅನ್ನದ ಹಿನ್ನೆಲೆ, ಮಾಧ್ಯಮಗಳ ಮೂಲಕ ತಮ್ಮ ಅಳಲನ್ನು ಆಡಳಿತ ವ್ಯವಸ್ಥೆಯ ವರೆಗೂ ತಲುಪಿಸುವ ಪ್ರಯತ್ನ ಮಾಡಿದ್ದರು. ಇನ್ ನ್ಯೂಸ್ ವರದಿ ಪ್ರಸಾರವಾಗುತ್ತಲೇ, ಎಚ್ಚೆತ್ತುಕೊಂಡು ಮಹಾನಗರ ಪಾಲಿಕೆಯೂ ಅರ್ಧಕ್ಕೆ ನಿಂತ ಕಾಮಗಾರಿಯನ್ನು ಪೂರ್ಣಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಹಿನ್ನೆಲೆ ಜನರು ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
