900 ವರ್ಷಗಳ ಹಿಂದೆ ನಡೆದ ವಚನ ಕ್ರಾಂತಿಯೂ ಇಂದಿಗೂ ಸಂಪೂರ್ಣ ಜಗತ್ತಿಗೆ ಮಾದರಿಗಯಾಗಿದೆ ಎಂದು ಸಾಹಿತಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು.ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉಪಸ್ಥಿತ ಗಣ್ಯರಿಂದ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.
ಬೆಳಗಾವಿ ಜಿಲ್ಲಾ ಪಂಚಾಯಿತಿಯ ಸಹ ಕಾರ್ಯದರ್ಶಿಗಳಾದ ಬಸವರಾಜ್ ಹೆಗ್ಗನಾಯಕ ಅವರು, 12ನೇ ಶತಮಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಜನಿಸಿದ ಹಡಪದ ಅಪ್ಪಣ್ಣ ಹಾಗೂ ಅವರ ಪತ್ನಿಯೂ ಕೂಡ ವಚನಗಾರ್ತಿಯಾಗಿದ್ದರು. ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣ ಕಾರ್ಯನಿರ್ವಹಿಸುತ್ತಿದ್ದರು. ಮೂಢ ನಂಬಿಕೆ ಮತ್ತು ಕಂದಾಚಾರವನ್ನು ತಮ್ಮ ಆಚರಣೆ ಮತ್ತು ವಚನ ಸಾಹಿತ್ಯದ ಮೂಲಕ ಹೊಗಲಾಡಿಸಲು ಅವರು ಶ್ರಮಿಸಿದವರು. ಅವರ ಶ್ರೇಷ್ಠ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು ಕರೆ ನೀಡಿದರು.
ಇನ್ನು ಉಪನ್ಯಾಸವನ್ನು ನೀಡಿದ ಸಾಹಿತಿ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು, ಜಗತ್ತಿನ ಹಲವು ರಾಷ್ಟ್ರಗಳು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವೀಕರಿಸಿವೆ. ಇದಕ್ಕೆ ಕಾರಣ ಕರ್ನಾಟಕದಲ್ಲಿ ನಡೆದ ಕಲ್ಯಾಣ ಕ್ರಾಂತಿ ಎಂಬುದು ಹೆಮ್ಮೆಯ ವಿಷಯ. ಇದೇ ಕಾರಣಕ್ಕೆ ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಜಗಜ್ಯೋತಿ ಬಸವಣ್ಣನವರನ್ನು ರಾಜ್ಯ ಸರ್ಕಾರ ಘೋಷಿಸಿರುವುದು ಶ್ಲಾಘನೀಯ. ವೈಚಾರಿಕ ಚಳುವಳಿಯ ಬಸವಾದಿ ಶರಣರೆಲ್ಲರೂ ಕೂಡ ಸಾಂಸ್ಕೃತಿಕ ನಾಯಕರೇ. ಅವರ ಬದುಕು ಅವರ ಜೀವನ ವಿಧಾನಗಳು ಒಂದೊಂದು ಸಂಸ್ಕೃತಿಯನ್ನು ತಿಳಿಸುತ್ತವೆ. ಶರಣರ ಕುರಿತು ಹಲವೆಡೆ ಇಂದಿಗೂ ಅಧ್ಯಯನ ನಡೆಯುತ್ತಿವೆ. 900 ವರ್ಷಗಳ ಬಳಿಕವೂ ವಚನ ಕ್ರಾಂತಿ ಇಂದಿಗೂ ಪ್ರಭಾವ ಬೀರುತ್ತದೆ. ಬೇಧಭಾವವಿಲ್ಲದ ಅಬೇಧ ಸಮಾಜವನ್ನು ನಿರ್ಮಿಸುವುದು ಅಪ್ಪ ಬಸವಣ್ಣನವರ ಕನಸಾಗಿತ್ತು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಶಿವಾನಂದ, ಮಹಾಂತೇಶ ಹಂಪಣ್ಣನವರ, ಸುರೇಶ್, ಆನಂದ, ರಾಜು, ಸಂತೋಷ ಹಡಪದ, ಬಸವರಾಜ್ ಹಡಪದ, ಸಾತಗೌಡ ನಾವಿ, ನಾಗಪ್ಪ ಹಡಪದ, ಸೋಮು ನಾವಲಗಿ, ಪ್ರೇಮ ಚೌಗಲಾ ಇನ್ನುಳಿದವರು ಉಪಸ್ಥಿತರಿದ್ಧರು.