ಬೆಳಗಾವಿಯ ಡಾ. ಎಸ್.ಪಿ.ಎಂ. ರಸ್ತೆ, ಆಠಲೇ ಗುರುಜಿ ರಸ್ತೆ ಹಾಗೂ ಶಾಸ್ತ್ರಿ ನಗರದ ಮಧ್ಯವರ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳವು ಈ ವರ್ಷ 75ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಅಮೃತ ಮಹೋತ್ಸವವಾಗಿ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಭಾನುವಾರ, ಬೆಳಗಾವಿಯ ಗುಜರಾತ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣೆ, ದೃಷ್ಟಿ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ನಿವಾಸಿಗಳಿಂದ ಭರ್ಜರಿ ಸ್ಪಂದನೆ ದೊರೆಯಿತು. ಈ ವೇಳೆ ಒಟ್ಟು 46 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮದ ಪ್ರಮುಖ ಅತಿಥಿಗಳಾಗಿ ಗುಜರಾತ್ ಭವನದ ಅಧ್ಯಕ್ಷ ರಾಮೇಶ್ ಲಟಡ್, ಕಾರ್ಯದರ್ಶಿ ವಿಜಯ್ ಭಾನುಶಾಲಿ ಹಾಗೂ ಗಣೇಶೋತ್ಸವ ಮಂಡಳದ ಅಧ್ಯಕ್ಷ ಸುನಿಲ್ ರಾವ್ ಉಪಸ್ಥಿತರಿದ್ದರು.
ಆರೋಗ್ಯ ತಪಾಸಣೆಯನ್ನು ಮಹಾತ್ಮಾ ಫುಲೆ ರಸ್ತೆಯ ಯುನಿಕೇರ್ ಆಸ್ಪತ್ರೆಯ ವೈದ್ಯಕೀಯ ತಂಡ ನಡೆಸಿತು. ನೇತ್ರ ತಪಾಸಣೆಯನ್ನು ಪ್ರಸಿದ್ಧ ನೇತ್ರ ತಜ್ಞೆ ಡಾ. ನೂತನ ಕಂಗ್ರಾಳಕರ ನೆರವೇರಿಸಿದರು. ರಕ್ತದಾನ ಶಿಬಿರವನ್ನು ಮಹಾವೀರ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.. ಈ ಕಾರ್ಯಕ್ರಮದ ಯಶಸ್ಸಿಗೆ ಮಂಡಳದ ಎಲ್ಲಾ ಕಾರ್ಯಕರ್ತರು ಅತ್ಯಂತ ಶ್ರಮಪಟ್ಟು ಕೆಲಸ ಮಾಡಿದ್ದು, ಸಂಘಟನೆಯ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.