ಬೆಳಗಾವಿ ನಗರವನ್ನು ಗಾಂಜಾ ಮುಕ್ತ ನಗರವನ್ನಾಗಲಿಸಲು ಮತ್ತು ಜನರ ಕುಂದು ಕೊರತೆಗಳನ್ನು ನಿವಾರಿಸಲು ಜನರ ಮಧ್ಯೆಯೇ ಇದ್ದು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಗರದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು ಹೇಳಿದರು.
ಬೆಳಗಾವಿ ಪೊಲೀಸ್ ಇನ್ನಷ್ಟು ಜನಸ್ನೇಹಿಯಾಗುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರು ಹೊಸ ಯೋಜನೆಯನ್ನು ರೂಪಿಸಿದ್ದು, ಇಂದು ಬೆಳಗಾವಿಯ ಬಂಟರ ಭವನದಲ್ಲಿ ನಡೆದ ಸಮಾರಂಭದಲ್ಲಿ ಮನೆ ಮನೆಗೆ ಪೊಲೀಸ್ ಹೊಸ ಯೋಜನೆಗೆ ಚಾಲನೆಯನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ಸಾರ್ವಜನಿಕರು ನಗರದಲ್ಲಿ ಗಾಂಜಾ ಸೇವನೆ, ತಂಟೆ ತಕರಾರು, ಕೌಟುಂಬಿಕ ಕಲಹ, ಇನ್ನುಳಿದ ಸಮಸ್ಯೆಗಳ ನಿವಾರಣೆಗೆ ಕಮಿಷ್ನರ್ ಅವರ ಗಮನಕ್ಕೆ ತಂದರು. ಅಲ್ಲದೇ ಮನೆ ಮನೆಗೆ ಪೊಲೀಸ್ ಉಪಕ್ರಮದ ಕುರಿತು ಪ್ರಶ್ನೆಗಳನ್ನು ಕೇಳಿ ಮಾಹಿತಿಯನ್ನು ಪಡೆದರು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರು, ಬೆಳಗಾವಿ ಪೊಲೀಸರು ಮನೆ ಮನೆಗೆ ಭೇಟಿ ನೀಡಿ ಜನರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಈಗಾಗಲೇ ಬೆಳಗಾವಿಯಲ್ಲಿ ಗಾಂಜಾ ವಿರುದ್ಧ ಪೊಲೀಸ್ ಇಲಾಖೆಯೂ ಕ್ರಮವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬೆಳಗಾವಿಯನ್ನು ಗಾಂಜಾ ಮುಕ್ತ ನಗರವನ್ನಾಗಿಸಲಾಗುವುದು ಎಂದರು. ಮಹಿಳೆಯರು ಮುಕ್ತವಾಗಿ ಓಡಾಡುವ ವಾತಾವರಣವನ್ನು ನಿರ್ಮಿಸುವ ಉದ್ಧೇಶವನ್ನು ಪೊಲೀಸ್ ಇಲಾಖೆ ಹೊಂದಿದ್ದು, ಮನೆ ಮನೆ ಪೊಲೀಸ್ ಕಾರ್ಯಕ್ರಮದ ತಂಡದಲ್ಲಿ ಮಹಿಳಾ ಪೊಲೀಸರು ಸಹ ಇದ್ದು, ಅವರಿಗೆ ಮಹಿಳೆಯರು ತಮ್ಮ ಸಮಸ್ಯೆಗಳನ್ನು ತಿಳಿಸಬಹುದಾಗಿದೆ ಎಂದರು.
ಮುಂದುವರೆದು ಮಾತನಾಡಿದ ಅವರು ಮನೆ ಮನೆ ಪೊಲೀಸ್ ಕೇವಲ ಪೊಲೀಸ್ ಇಲಾಖೆಯ ಕಾರ್ಯ ಮಾತ್ರ ಮಾಡುವುದಿಲ್ಲ. ರಸ್ತೆ, ಚರಂಡಿ, ಬೀದಿ ದೀಪ ಯಾವುದೇ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೂ ಅವುಗಳನ್ನು ನೀಗಿಸಲು ಪೊಲೀಸ್ ಇಲಾಖೆ ಶ್ರಮಿಸಲಿದೆ ಎಂದರು. ಪ್ರತಿದಿನ ಮನೆ ಮನೆ ಪೊಲೀಸ್ ತಂಡ ನಿಮ್ಮ ಪ್ರದೇಶದಲ್ಲೇ ಇರಲಿದೆ. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲಿದೆ. 24 ಗಂಟೆ 112 ಸಹಾಯವಾಣಿ ಕಾರ್ಯರತವಾಗಿರಲಿದೆ ಎಂದರು.
ಪೊಲೀಸ್ ಇಲಾಖೆಯ ಈ ಪ್ರಶಂಸನೀಯ ಉಪಕ್ರಮವನ್ನು ಸ್ವಾಗತಿಸಿ ಸಾರ್ವಜನಿಕರಿಂದ ನಗರ ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿಸಿಪಿ ನಿರಂಜನ್ ಅರಸ್, ಎಸಿಪಿ ಸದಾಶಿವ ಕಟ್ಟಿಮನಿ, ಸಿಪಿಐ ಜೆ.ಎಂ. ಕಾಲಿಮಿರ್ಚಿ ಸೇರಿದಂತೆ ಇನ್ನುಳಿದವ ಪೊಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ಧರು.