ನಾಸಾ ನಂತರ ಇದೀಗ ದೇಶದಲ್ಲಿ ಇಸ್ರೋ ಹೆಸರು ಸಾಧನೆ ವಿಷಯದಲ್ಲಿ ಕೇಳಿ ಬರುತ್ತಿದೆ. ಬಾಹ್ಯಾಕಾಶದಲ್ಲಿ ಧಾನ್ಯ ಬೆಳೆಸಿದ್ದು ಇದೇ ಮೊದಲ ಪ್ರಯೋಗ ಇರಬಹುದು. ಈ ರೀತಿಯ ಪ್ರಯೋಗಕ್ಕೆ ನಮ್ಮ ಐಐಟಿ ಸಹಕಾರ ನೀಡುತ್ತದೆ. ಮುಂದೆ ಎಲ್ಲದರಲ್ಲೂ ಐಐಟಿ ಧಾರವಾಡವು ತನ್ನ ಸಹಭಾಗಿತ್ವ ಮಾಡಲಿದೆ ಎಂದು ಐಐಟಿ ನಿರ್ದೇಶಕ ಪ್ರೊ.ವಿ.ಆರ್.ದೇಸಾಯಿ ತಿಳಿಸಿದರು.
ಬಾಹ್ಯಾಕಾಶ ನಿಲ್ದಾಣಕ್ಕೆ ಧಾರವಾಡದ ಕೃಷಿ ವಿಶ್ವವಿದ್ಯಾಲಯವು ಹಾಗೂ ಧಾರವಾಡದ ಐಐಟಿ ಸಹಯೋಗದೊಂದಿಗೆ ಕಳುಹಿಸಿಕೊಟ್ಟಿದ್ದ ಮೆಂತ್ಯೆ ಮತ್ತು ಹೆಸರು ಧಾನ್ಯ ಚಿಗುರೊಡೆದಿದ್ದು ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಭಾರಿ ಸುಧೀರ್ ಸಿದ್ದಾಪುರ ಎಂಬ ವಿಜ್ಞಾನಿ ಧಾರವಾಡ ಕೃಷಿ ವಿವಿ ಜೊತೆ ಸೇರಿಕೊಂಡು ಬಾಹ್ಯಾಕಾಶದಲ್ಲಿ ಬೀಜ ಮೊಳಕೆಯೊಡೆಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
ಯಾವುದೇ ಬೀಜ ಮೊಳಕೆಯೊಡೆಲು ನೀರು ಬೇಕು. ಇದನ್ನು ನಾವು ಮಣ್ಣು ರಹಿತ ಕೃಷಿ ಎಂದು ಕರೆಯುತ್ತೇವೆ. 40 ವರ್ಷದ ಹಿಂದೆ ನಮ್ಮಲ್ಲಿ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹೋಗಿದ್ದರು. ಈಗ ನಮ್ಮವರೇ ಆದ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ನಾಸಾ ಜೊತೆ ಸೇರಿ ಕೆಲಸ ಮಾಡುತ್ತಿದೆ. ಹೀಗಾಗಿ ನಮ್ಮ ಸಂಶೋಧನಾ ಸಂಸ್ಥೆ ಹೆಸರು ವಿಶ್ವದಲ್ಲೇ ದೊಡ್ಡಮಟ್ಟಕ್ಕೆ ಸುದ್ದಿಯಾಗಿದೆ ಎಂದರು.