ಭೀಮಾತೀರದ ಭಾಗಪ್ಪ ಹರಿಜನ್ ಹತ್ಯೆ ಬಳಿಕ ತಣ್ಣಾಗಿದ್ದ ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಕೆಲ ವರ್ಷಗಳ ಹಿಂದೆ ಭಾಗಪ್ಪನ ಶಿಷ್ಯನಾಗಿ ಬಳಿಕ ದೂರವಾಗಿದ್ದ ರೌಡಿಶೀಟರ್ ಸುಶೀಲ್ ಕಾಳೆಯನ್ನ ಹತ್ಯೆ ಮಾಡಿದ್ದ ಹಂತಕರಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ಇಬ್ಬರು ಆಸ್ಪತ್ರೆ ಪಾಲಾಗಿದ್ದಾರೆ. ನಾಲ್ವರು ಪರಾರಿಯಾಗಿದ್ದಾರೆ.
ವಿಜಯಪುರ ನಗರದ ಎಸ್ ಎಸ್ ಹೈಸ್ಕೂಲ್ ಕಾಂಪ್ಲೆಕ್ಸ್ ನಲ್ಲಿ ನಿನ್ನೆ ನಡೆದಿದ್ದ ರೌಡಿಶೀಟರ್ ಸುಶೀಲ್ ಕಾಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಂತೆ ಇಬ್ಬರು ಆರೋಪಿಗಳಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ತಡರಾತ್ರಿ ಆರೋಪಿಗಳ ಸುಳಿವು ಸಿಕ್ಕಾಗ ವಿಜಯಪುರ ಹೊರಭಾಗದ ಇಟ್ಟಂಗಿಹಾಳ್ ಬಳಿ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ತಮ್ಮ ಬಳಿಯಿದ್ದ ಕಂಟ್ರಿ ಪಿಸ್ತೂಲ್ ನಿಂದ ದಾಳಿ ಮಾಡೋಕೆ ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳಾದ ಆಕಾಶ್ ಹಾಗೂ ಸುದೀಪ್ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು, ಮೂವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಬೈಕ್, ಕಂಟ್ರಿ ಮೇಡ್ ಪಿಸ್ತೂಲ್, ಮೂರು ಬುಲೆಟ್ ಕೇಸ್ ಪತ್ತೆಯಾಗಿವೆ.
ಭೀಕರವಾಗಿ ಹತ್ಯೆಯಾಗಿರುವ ರೌಡಿ ಶೀಟರ್ ಸುಶೀಲ್ ಕಾಳೆ ವಿಜಯಪುರದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ. ಹಾಗಂತ ಇವನೇನು ಸಾಮಾನ್ಯದವನಲ್ಲ. ಒಂದು ಸಮಯದಲ್ಲಿ ಭೀಮಾತೀರದ ದಿ ಮೋಸ್ಟ್ ಡೆಂಜರ್ ಹಂತಕ ಬಾಗಪ್ಪ ಹರಿಜನ್ ಬಲಗೈ ಬಂಟನಾಗಿದ್ದ. ಬಳಿಕ ಬಾಗಪ್ಪನಿಂದ ದೂರವೇ ಉಳಿದು ಫೈನಾನ್ಸ್ ಮಾಡಿದ್ದ. ಕಳೆದ 2014 ಅಗಸ್ಟ್ 23 ರಂದು ವಿಜಯಪುರ ನಗರದಲ್ಲಿ ನಡೆದಿದ್ದ ಬಸ್ ಕಂಡಕ್ಟರ್ ಸುರೇಶ್ ಲಾಳಸಂಗಿ ಕೊಲೆ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದ. ಶಸ್ತ್ರಾಸ್ತ ಕಾಯ್ದೆ ಅಡಿಯಲ್ಲಿ ಈತನ ಮೇಲೆ ಪ್ರಕರಣಗಳು ಇದ್ದವು.
ಇದಲ್ಲದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್ ನಲ್ಲಿ ಪರಾರಿಯಾಗಿದ್ದ ಆರೋಪಿಗಳ ಜೊತೆಗೆ ನಂಟು ಹೊಂದಿದ್ದನೆಂದು ಪೊಲೀಸರು ವಿಚಾರಣೆ ನಡೆಸಿದ್ದರು. ಕಳೆದ ಕಲ ವರ್ಷಗಳಿಂದ ಅಪರಾಧ ಕೃತ್ಯದಿಂದ ದೂರ ಉಳಿದು ಜೀವನ ನಡೆಸುತ್ತಿದ್ದ. ಮಹಾರಾಷ್ಟ್ರದ ಸೋಲಾಪೂರದಲ್ಲಿ ಡ್ಯಾನ್ಸ್ ಬಾರ್ ನಡೆಸುತ್ತಿದ್ದ. ಇದೀಗ ಏಕಾಏಕಿ ಭಾಗಪ್ಪನ ಸಾವಿನ ಬಳಿಕ ಆತನ ಹಳೆಯ ಶಿಷ್ಯ ಹೀಗೆ ಭೀಕರವಾಗಿ ಹತ್ಯೆಯಾಗಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಸದ್ಯ ಪ್ರಕರಣ ಸಂಬಂಧ ಆರು ಜನರ ಪೈಕಿ ಇಬ್ಬರು ಗುಂಡೇಟು ತಿಂದಿದ್ದು, ಉಳಿದ ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ