Uncategorized

ಬೆಳಗಾವಿ: ವಿದ್ಯಾರ್ಥಿಗಳು ಮಾನವೀಯತೆ ಜೊತೆಗೆ ಶ್ರೇಷ್ಠ ಸಾಧನೆ ಮಾಡುವತ್ತ ಗಮನಹರಿಸಲು ಬಸವರಾಜ ಗಾರ್ಗಿ ಸಲಹೆ

Share

ಬೆಳಗಾವಿ : ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಶ್ರೇಷ್ಠ ಶೈಕ್ಷಣಿಕ ಸಾಧನೆ ಮಾಡುವತ್ತ ಗರಿಷ್ಠ ಗಮನಹರಿಸಬೇಕು ಎಂದು ಜನಸಾಹಿತ್ಯ ಪೀಠದ ಅಧ್ಯಕ್ಷ ಹಾಗೂ ಮಕ್ಕಳ ಸಾಹಿತಿ ಬಸವರಾಜ ಗಾರ್ಗಿ ಸಲಹೆ ನೀಡಿದರು. ಕೆಎಲ್ ಇ ಸಂಸ್ಥೆಯ ಜಿ.ಎ.ಪ್ರೌಢಶಾಲೆಯ 2025- 26 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಒಕ್ಕೂಟ ಹಾಗೂ ವಿವಿಧ ಸಂಘಗಳ ಉದ್ಘಾಟನೆಯನ್ನು ಶುಕ್ರವಾರ ನೆರವೇರಿಸಿ ಅವರು ಮಾತನಾಡಿದರು.

ಜಿ.ಎ. ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಹಳ ಪುಣ್ಯವಂತರು. ಕೆಎಲ್ ಇ ಇಂದು 310 ಕ್ಕೂ ಅಂಗಸಂಸ್ಥೆಗಳನ್ನು ಹೊಂದಿದ್ದು, ಅಂತಹ ಅತ್ಯಂತ ದೊಡ್ಡ ಸಂಸ್ಥೆಯ ಮಾತೃಸಂಸ್ಥೆ ಇದಾಗಿರುವುದು ನಮಗೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿ ಎಂದು ಹೇಳಿದರು. ಡೆಪ್ಯುಟಿ ಕಮಿಷನರ್ ಗಳಾಗಿದ್ದ
ಗಿಲಗಂಚಿ ಗುರುಸಿದ್ದಪ್ಪ, ಅರಟಾಳ ರುದ್ರಗೌಡರು ಮುಂತಾದ ಸಪ್ತರ್ಷಿಗಳು ಈ ಸಂಸ್ಥೆ ಹುಟ್ಟು ಹಾಕಿದ್ದು, ಇವರೆಲ್ಲರೂ ಇತಿಹಾಸ ಪುರುಷರು. ಈ ಪ್ರಾತಃಸ್ಮರಣೀಯರು ಕಟ್ಟಿದ ಈ ಸಂಸ್ಥೆಯಲ್ಲಿ ಓದುತ್ತಿರುವ ನೀವೆಲ್ಲರೂ ನಿಜಕ್ಕೂ ಪುಣ್ಯವಂತರು ಎಂದು ಹೇಳಿದರು.

ಶಿಕ್ಷಣದ ಮೂಲಕ ಸಮಾಜದ ಸುಧಾರಣೆ ಸಾಧ್ಯವಿದೆ. ಗ್ರಾಮೀಣ ಮಕ್ಕಳಲ್ಲಿ ಶಿಕ್ಷಣದ ಬೀಜ ಬಿತ್ತಬೇಕು ಎಂಬ ಕನಸು ಕಂಡ ನಮ್ಮ ಹಿರಿಯರ ಆಶಯವನ್ನು ನೀವು ಈಡೇರಿಸುವ ನಿಟ್ಟಿನಲ್ಲಿ ಓದಿಗೆ ತೊಡಗಿಸಿಕೊಳ್ಳಬೇಕು. ಇತಿಹಾಸ ಪುರುಷರು ಹುಟ್ಟು ಹಾಕಿದ ಈ ಸಂಸ್ಥೆಯಲ್ಲಿ ಓದುವ ನೀವೆಲ್ಲರೂ ಭವ್ಯ ಸಾಧಕರಾಗಬೇಕು ಎಂದು ತಿಳಿಸಿದರು. ಶಿಕ್ಷಣ ಕೇವಲ ಅಂಕಪಟ್ಟಿಗೆ ಮಾತ್ರ ಸೀಮಿತವಾಗದೇ ಸಾಂಸ್ಕೃತಿಕ , ಕ್ರೀಡೆ, ವಿಜ್ಞಾನ, ಸಂಗೀತ, ನಟನೆ ಇವೆಲ್ಲವೂ ನಮ್ಮ ವ್ಯಕ್ತಿತ್ವ ರೂಪಿಸುವಲ್ಲಿ ನೆರವಾಗುತ್ತದೆ. ಭವಿಷ್ಯದ ವ್ಯಕ್ತಿತ್ವಕ್ಕೆ ಇವೆಲ್ಲವೂ ಮಾರ್ಗದರ್ಶಿಯಾಗಲಿವೆ.

ಕೇವಲ ವಿದ್ಯೆಯಿಂದ ಮಾತ್ರ ಎಲ್ಲವೂ ಸಾಧ್ಯವಿಲ್ಲ. ಪರಿಪೂರ್ಣ ವ್ಯಕ್ತಿತ್ವಕ್ಕೆ ಎಲ್ಲಾ ಪೂರಕ ಚಟುವಟಿಕೆ ಬಹಳ ಮುಖ್ಯವಾಗಿರುತ್ತವೆ. ಈ ದಿಸೆಯಲ್ಲಿ ನಮ್ಮ ಓದು ಸಾಗಬೇಕು. ತಂದೆ-ತಾಯಿ ಕಂಡ ಕನಸುಗಳನ್ನು ಈಡೇರಿಸಿಕೊಳ್ಳಲು ಉಜ್ವಲವಾದ ಅವಕಾಶ ಲಭಿಸಿದೆ. ಶಾಲಾ ಆರಂಭಿಕ ದಿನಗಳಲ್ಲೇ ನೀವು ಕಠಿಣ ಓದಿನಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಬೇಕು. ಅದರಲ್ಲೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರಿಶ್ರಮಪಟ್ಟು ಓದಿ ರಾಜ್ಯದಲ್ಲೇ ಮುಂಚೂಣಿ ಸ್ಥಾನ ಅಲಂಕರಿಸುವಂತಾಗಬೇಕು. ಶ್ರೇಷ್ಠ ಶಿಕ್ಷಕ ಸೇನಾನಿಗಳೇ ಇಲ್ಲಿ ನಿಮಗೆ ಶಿಕ್ಷಣ ಧಾರೆ ಎರೆಯುತ್ತಿದ್ದಾರೆ. ಈ ವರ್ಷ ನೂರಕ್ಕೆ ನೂರು‌ ಫಲಿತಾಂಶ ಪಡೆಯುವ ಜೊತೆಗೆ ಸಾಧನೆ ಮಾಡಿ ತಂದೆ-ತಾಯಿ, ಸಂಸ್ಥೆಗೆ ಕೀರ್ತಿ ತರಬೇಕು ಎಂದು ಅವರು ಕಿವಿಮಾತು ಹೇಳಿದರು.

ಉಪ ಪ್ರಾಚಾರ್ಯ ಸಿ.ಪಿ.ದೇವರುಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಭಾರ ಪ್ರಾಚಾರ್ಯ ಡಿ.ಎಸ್.ಪವಾರ, ಒಕ್ಕೂಟದ ಅಧ್ಯಕ್ಷೆ ಸೀಮಾ ಕೋರೆ, ಶಿಕ್ಷಕರಾದ ಸಿ.ಎಂ.ಪಾಗಾದ, ಎ.ಅರ್.ಪಾಟೀಲ, ಶಾಲಾ ಪ್ರಧಾನಿ ಶ್ರೇಯಾ ಕುಂದರನಾಡ, ಉಪ ಪ್ರಧಾನಿ ಹುಸೇನ್ ಪಠಾಣ ಉಪಸ್ಥಿತರಿದ್ದರು.
ಶಾಲಾ ಸಂಸತ್ತಿನ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.

ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಎ.ಅರ್.ಪಾಟೀಲ ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎಸ್.ಜೆ.ಏಳುಕೋಟಿ ಪರಿಚಯಿಸಿದರು. ಪಿ.ಎಸ್.ಚಿಮ್ಮಡ ಮತ್ತು ಎಸ್.ಎ. ಹೊಸಟ್ಟಿ ನಿರೂಪಿಸಿದರು. ಎಂ.ಎಸ್.ಮಗದುಮ ವಂದಿಸಿದರು. ಜನ ಸಾಹಿತ್ಯ ಪೀಠದ ವತಿಯಿಂದ ಪ್ರೌಢ ಶಾಲೆಯ ಸ್ಕೌಟ್ಸ್ ವಿಭಾಗದ ಬಡ ವಿದ್ಯಾರ್ಥಿಗಳಿಗೆ 10 ಜೊತೆ ಸಮವಸ್ತ್ರವನ್ನು ವಿತರಿಸುವುದಾಗಿ ತಿಳಿಸಿದರು.

Tags:

error: Content is protected !!