ಇಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ. ವಿಶ್ವದಲ್ಲೇಡೆ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗಿದೆ. ‘ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ’ ಎಂಬುದು ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವಾಗಿದೆ. ವಿಜಯಪುರ ಜಿಲ್ಲೆಯ ವಿವಿದೆಡೆ ಯೋಗ ದಿನಾಚರಣೆಯನ್ನು ಬಹು ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಈ ಕುರಿತು ಇಲ್ಲಿದೆ ಒಂದು ವರದಿ.
ಯೋಗವು ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ಆಧ್ಯಾತ್ಮಿಕ ಮತ್ತು ದೈಹಿಕ ಅಭ್ಯಾಸವಾಗಿದೆ. ಇದು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ. ಯೋಗವನ್ನು ನಿಯಮಿತವಾಗಿ ಮಾಡುವುದರಿಂದ, ರಕ್ತಪರಿಚಲನೆ, ಜೀರ್ಣಕ್ರಿಯೆ ಸರಾಗವಾಗಿ ಉಂಟಾಗಿ, ದೈಹಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ. ಅಲ್ಲದೆ, ಒತ್ತಡದ ಜೀವನಶೈಲಿಯಿಂದ ಪಾರಾಗಿ, ಮಾನಸಿಕ ನೆಮ್ಮದಿ ಪಡೆಯಲು, ಉತ್ತಮ ನಿದ್ರೆಗಾಗಿ ಯೋಗವು ಸಹಕರಿಸುತ್ತದೆ ಎಂದು ವಿಶ್ವಸಂಸ್ಥೆಯು ಯೋಗ ದಿನಾಚರಣೆಯನ್ನು ಜೂ.21 ಆಚರಿಸಲು ನಿರ್ಧರಿಸಿ ಹತ್ತು ವರ್ಷಗಳೇ ಕಳೆದಿವೆ. ಇತ್ತ ವಿಜಯಪುರ ನಗರದ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಧಾರವಾಡ ಹಾಗೂ ಜಿಲ್ಲಾ ಆಯುಶ್ ಇಲಾಖೆ ವತಿಯಿಂದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ರಾಜ್ಯಮಟ್ಟದ ಯೋಗೋತ್ಸವ ಕಾರ್ಯಕ್ರಮ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನನ್ನು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅದ್ಯಕ್ಷ ಸಂಗಮೇಶ ಬಬಲೇಶ್ವರ ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆಮಾಡಿದರು. ಜಿಲ್ಲಾಧಿಕಾರಿ ಟಿ ಭೂಬಾಲನ್. ಜಿಲ್ಲಾಪಂಚಾಯತ್ ಸಿಇಓ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಸೇರಿದಂತೆ ಹಲವು ಅಧಿಕಾರಿಗಳು, ನಾಗರಿಕರು, ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು. ಇನ್ನೂ ಜಿಲ್ಲೆಯ ತಾಲ್ಲೂಕು ಪ್ರದೇಶಗಳಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಯೋಗ ದಿನಾಚರಣೆಯನ್ನು ಹಮ್ಮಿಕೊಂಡು ಯೋಗದ ಮಹತ್ವ ಸಾರಲಾಯಿತು. ಹತ್ತು ಹಲವು ದಿನಗಳ ಹಿಂದೆ ಯೋಗ ದಿನಾಚರಣೆಯ ಸಿದ್ಧತೆಗಳನ್ನು ನಡೆಸಲಾಗಿತ್ತು. ಜನಪ್ರತಿನಿಧಿಗಳು, ವೈದ್ಯರು, ಅಧಿಕಾರಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು.
ಇನ್ನೂ ನಗರದ ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ನಗರದ ಪ್ರತಿಷ್ಠಿತ ರವೀಂದ್ರನಾಥ ಠಾಗೋರ್ ಶಾಲೆ, ಎಕ್ಸಲಂಟ್ ಶಾಲೆ, ಶಾಂತಿನಿಕೇತನ ಶಾಲೆ, ಅಭಿನವ ಶಿಕ್ಷಣ ಸಂಸ್ಥೆ, ಪ್ರೇರಣಾ ಶಾಲೆ ಸೇರಿದಂತೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಯೋಗ ಬಲ್ಲವನಿಗೆ ರೋಗ ಇಲ್ಲಾ ಎಂಬ ಕುರಿತು ಅರಿವು ಮೂಡಿಸಲಾಯಿತು. ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು ಸೇರಿದಂತೆ ಎಲ್ಲರೂ ಯೋಗ ಮಾಡಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗದ ಮಹತ್ವ ತಿಳಿದುಕೊಂಡರು.
ಒಟ್ನಲ್ಲಿ ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತ. ಇಂದು ಭಾರತ ಪರಿಚಯಿಸಿದ ಯೋಗವನ್ನು ಇಡಿ ವಿಶ್ವವೇ ಆಚರಿಸುತ್ತಿರುವದು ಭಾರತೀಯರಾದ ನಮಗೆ ಹೆಮ್ಮೆಯ ವಿಷಯವೇ ಸರಿ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.