ಹಕ್ಕು ಪತ್ರ ವಿತರಣೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮುಂದಿನ ತಿಂಗಳಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ಎಲ್ಲ ಫಲಾನುಭವಿಗಳಿಗೆ ಹೊಸಪೇಟೆಯಲ್ಲಿ ಸಿಎಂ ಹಕ್ಕುಪತ್ರ ವಿತರಿಸುವರು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಹೇಳಿದರು.
ಈ ಕುರಿತು ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಹಕ್ಕು ಪತ್ರ ವಿತರಣೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಎಲ್ಲೆಲ್ಲಿ ಕಂದಾಯ ಗ್ರಾಮಗಳನ್ನು ಹಾಗೂ ಉಪ ಗ್ರಾಮಗಳನ್ನು ಸೃಷ್ಟಿ ಮಾಡಲಾಗಿದೆಯೋ ಅಲ್ಲಿಯ ವಾಸಿಗಳಿಗೆ ಹಕ್ಕು ಪತ್ರ ಕೊಡಲು ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ನಿರ್ದೇಶನ ನೀಡಿದ್ದಾರೆ. ಅದಕ್ಕಾಗಿ 3700 ಹಕ್ಕು ಪತ್ರಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ಖರೀದಿ ಪತ್ರ ಮತ್ತು ಪಹಣಿ ಪತ್ರವನ್ನೂ ಕೊಡುವ ಸಿದ್ಧತೆ ಮಾಡಲಾಗಿದೆ.
ಮುಂದಿನ ತಿಂಗಳು 15ರಿಂದ 20ನೇ ತಾರೀಖಿನ ಒಳಗಾಗಿ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಸಮಾವೇಶ ಮಾಡಲಿದ್ದಾರೆ. ಅಲ್ಲಿ ಬೆಳಗಾವಿ ಜಿಲ್ಲೆ ಸಹಿತ ಎಲ್ಲ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸುತ್ತಾರೆ. ಕಂದಾಯ ಗ್ರಾಮಗಳಿಗೆ ಸಂಬಂಧಪಟ್ಟಂತೆ ಇನ್ನೂ 1700 ಹಕ್ಕುಪತ್ರಗಳು ನಮ್ಮಲ್ಲಿ ಪೆಂಡಿಂಗ್ ಇದ್ದು, ಒಂದು ತಿಂಗಳ ಒಳಗಾಗಿ ಅವುಗಳನ್ನೂ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವರಿಗೆ ಆಶ್ವಾಸನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.