ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ ಕೆರೆ ಒತ್ತುವರಿ ತೆರವುಗೊಳಿಸದ ಜಿಲ್ಲಾಧಿಕಾರಿ, ಸಿಇಒಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ಇಂದು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಸುಮಾರು ಶೇ.74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಕೇಳಿದರು.

ಕೆರೆ ಒತ್ತುವರಿ ತೆರವುಗೊಳಿಸದ ಜಿಲ್ಲಾಧಿಕಾರಿ, ಸಿಇಒಗಳ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ ಸಿಎಂ, ಸಭೆಯ ವೇಳೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲನೆ ನಡೆಸಿದರು. ಎರಡ್ಮೂರು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವು ಮಾಡದಿರುವುದನ್ನು ಗಮನಿಸಿ ಗರಂ ಆದ ಮುಖ್ಯಮಂತ್ರಿಗಳು, ಆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಭೆಯಲ್ಲೇ ಸೂಚನೆ ನೀಡಿದರು.
ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿಗಳು, ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ ಗರಂ ಆಗಿ ಜಿಲ್ಲಾಧಿಕಾರಿಗಳಿಂದ ವರದಿ ಪಡೆದರು. ರಾತ್ರಿ ಬಿದ್ದ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ, ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ಮುಖ್ಯಮಂತ್ರಿಗಳು, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ದ.ಕ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ AC, DC, ತಹಶೀಲ್ದಾರ್ ಕೋರ್ಟ್ಗಳಲ್ಲಿ ಬಾಕಿ ಕೇಸ್ಗಳು ಶೀಘ್ರ ವಿಲೇವಾರಿ ಆಗುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಮುಖ್ಯಮಂತ್ರಿಗಳು ಬೆಂಗಳೂರು ಗ್ರಾಮಾಂತರ ಮತ್ತು ಎರಡು ಜಿಲ್ಲೆಗಳಲ್ಲಿ ಮಾತ್ರ AC ಮತ್ತು DC ಕೋರ್ಟ್ಗಳಲ್ಲಿ ಐದು ವರ್ಷಕ್ಕೂ ಹಳೆಯದಾದ ಪ್ರಕರಣಗಳು ಬಾಕಿ ಇರುವುದಕ್ಕೆ ಅಸಮಾಧಾನಗೊಂಡ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.