ಅಥಣಿ : ಗ್ರಾಮದ ತಾಯಿ ಹಾಗೂ ಮಗನ ಹತ್ಯೆ ಪ್ರಕಾರಕ್ಕೆ ಸಂಬಂಧಿಸಿದಂತೆ ಓರ್ವ ಕೊಲೆ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದು ಇನ್ನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಳೆದ ಭಾನುವಾರ ಚಂದ್ರವ್ವ ಅಪ್ಪಾರಾಯ ಇಚೇರಿ (62), ವಿಠಲ್ ಅಪ್ಪರಾಯ ಇಚೇರಿ (42) ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಿ ಕಬ್ಬಿನ ತೋಟದಲ್ಲಿ ಮೃತದೇಹ ಎಸೆದ ಪ್ರಕರಣ ತನಿಖೆ ಕೈಗೊಂಡ ಅಥಣಿ ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಚಂದ್ರವ್ವನ ತಂಗಿಯ ಮಗಳ ಗಂಡನಾದ ತಾಲೂಕಿನ ಶೇಗುಣಸಿ ಗ್ರಾಮದ ಸುರೇಶ್ ರಾಮಪ್ಪ ಸವದತ್ತಿ ಪ್ರಮುಖ ಕೊಲೆ ಆರೋಪಿ ಆಗಿದ್ದು ತಿಳಿದುಬಂದಿದೆ. ಪೊಲೀಸರು ಗ್ರಾಮಕ್ಕೆ ಬಂದ ಸುದ್ದಿ ತಿಳಿಯುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಸುರೇಶ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದೇ ಗ್ರಾಮದ ಇನ್ನೋರ್ವ ಕೊಲೆ ಆರೋಪಿ ಶ್ರೀಶೈಲ ಹೊರಟ್ಟಿ ಪೊಲೀಸರು ಬಂದ ಸುದ್ದಿ ತಿಳಿಯುತ್ತುದ್ದಂತೆ ಕಬ್ಬಿನ ತೋಟದಲ್ಲಿ ತಲೆಮರೆಸಿಕೊಂಡಿದ್ದಲ್ಲದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜೋಡಿ ಕೊಲೆಗೆ ಕುಟುಂಬದ ಆಸ್ತಿ ಅಥವಾ ಹಣಕಾಸಿನ ವ್ಯವಹಾರ ಕಾರಣ ಇರುವ ಶಂಕೆ ವ್ಯಕ್ತವಾಗಿದೆ. ಇನ್ನೂ ಕೊಲೆ ಪ್ರಕರಣದಲ್ಲಿ ಯಾವುದೇ ಸುಳಿವು ಇಲ್ಲದಿದ್ದರೂ ಅಥಣಿ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೆದ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.