ಕರ್ತವ್ಯದಲ್ಲಿ ಇದ್ದಾಗಲೇ ಹೃದಯಾಘಾತವಾಗಿ ನಿಧನರಾದ ಜಿಲ್ಲೆಯ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿ.ಆರ್.ಪಿ.ಎಫ್.) ಯೋಧ ಶ್ರೀಶೈಲ ಹಿರೋಡಗಿ ಅವರ ಪಾರ್ಥಿವ ಶರೀರಕ್ಕೆ ಜವಳಿ, ಕಬ್ಬು, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಅವರು ಅಂತಿಮ ನಮನ ಸಲ್ಲಿಸಿದ್ದಾರೆ.

ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ 54 ವರ್ಷದ ಯೋಧ ಶ್ರೀಶೈಲ ಯಮನಪ್ಪ ಹಿರೋಡಗಿ ಇವರು ಡಿಸೆಂಬರ್ 1990 ರಿಂದ ಸಿ.ಆರ್.ಪಿ.ಎಫ್. ಯೋಧರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಹವಾಲ್ದಾರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
.
ಹೈದರಾಬಾದ್, ಪಂಜಾಬ್, ತ್ರಿಪುರ, ಜಮ್ಮು-ಕಾಶ್ಮೀರ, ಅಸ್ಸಾಂ, ಮಣಿಪುರ ಸೇರಿದಂತೆ ವಿವಿಧ ಕಡೆ ಸೇವೆ ಸಲ್ಲಿಸಿದ್ದರು.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕರ್ತವ್ಯದಲ್ಲಿ ಇದ್ದಾಗ ಯೋಧ ಶ್ರೀಶೈಲ ಅವರು ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಶುಕ್ರವಾರ ಮಧ್ಯಾಹ್ನ ಹುತಾತ್ಮ ಯೋಧ ಶ್ರೀಶೈಲ ಅವರ ಪಾರ್ಥಿವ ಶರೀರ ಹುಟ್ಡೂರು ಉಕ್ಕಲಿ ಗ್ರಾಮಕ್ಕೆ ಆಗಮಿಸಿತು. ವಿಷಯ ತಿಳಿಯುತ್ತಲೇ ಪೂರ್ವನಿರ್ಧಾರಿತ ಕಾರ್ಯಕ್ರಮ ರದ್ದುಪಡಿಸಿ ಉಕ್ಕಲಿ ಗ್ರಾಮಕ್ಕೆ ಧಾವಿಸಿದ ಸಚಿವರಾದ ಶಿವಾನಂದ ಪಾಟೀಲ ಅವರು, ಹುತಾತ್ಮ ಯೋಧ ಶ್ರೀಶೈಲ ಅವರ ಅಂತಿಮ ದರ್ಶನ ಪಡೆದು, ಪುಷ್ಪ ಗುಚ್ಚ ಇರಿಸಿ ಗೌರವ ಸಲ್ಲಿಸಿದರು.
ಬಳಿಕ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವರು, ನನ್ನ ಕ್ಷೇತ್ರ ವ್ಯಾಪ್ತಿಯ ಉಕ್ಕಲಿ ಗ್ರಾಮದ ವೀರಯೋಧ ಶ್ರೀಶೈಲ ಅವರ ಅಕಾಲಿಕ ಅಗಲಿಕೆ ತೀವ್ರ ನೋವು ತಂದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.
ಹುತಾತ್ಮ ಯೋಧರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಯೋಧರ ಅವಲಂಬಿತರು, ಕುಟುಂಬ ಸದಸ್ಯರಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.
ಹುತಾತ್ಮ ಯೋಧ ಶ್ರೀಶೈಲ ಅವರು ತಂದೆ ಯಮನಪ್ಪ, ತಾಯಿ ಕಮಲಾಬಾಯಿ, ಪತ್ನಿ ಶ್ರೀದೇವಿ, ಒಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.