ಅಕ್ರಮ ಮದ್ಯ ಮಾರಾಟದ ಬಗ್ಗೆ ಕಟ್ಟುನಿಟ್ಟಿನ ಕ್ರಮದ ಬಗ್ಗೆ ಮಾತನಾಡೋ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು, ಲಾಡ್ ತವರು ಕ್ಷೇತ್ರದಲ್ಲಿಯೇ ಅಕ್ರಮ ಮದ್ಯ ಮರಾಟದಿಂದ ಬೇಸತ್ತಿ ಹೋಗಿದ್ದ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಘಟನೆ ನಡೆದಿದೆ.

ಹೌದು! ಧಾರವಾಡ ತಾಲೂಕಿನ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಹಳ್ಳಿಗೇರಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರ ಮನೆ ಮೇಲೆ ಗ್ರಾಮಸ್ಥರು ದಾಳಿ ನಡೆಸಿ, ಮದ್ಯದ ಪ್ಯಾಕೇಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಹಳ್ಳಿಗೇರಿ ಗ್ರಾಮದ ಸಂಗೀತಾ ಸಾಲಗಟ್ಟಿ ಎಂಬ ಮಹಿಳೆ ತನ್ನ ಮನೆಯಲ್ಲಿಯೇ ಮದ್ಯದ ಪ್ಯಾಕೇಟ್‌ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ರೀತಿ ಮದ್ಯ ಮಾರಾಟ ಮಾಡಬಾರದು ಇದರಿಂದ ಗ್ರಾಮದ ಯುವಕರು, ಮಕ್ಕಳು ಹಾಳಾಗುತ್ತಿದ್ದಾರೆ ಎಂದು ಎಚ್ಚರಿಸಿದರೂ ಸಂಗೀತಾ ಮಾತ್ರ ಮದ್ಯ ಮಾರಾಟ ನಿಲ್ಲಿಸಿರಲಿಲ್ಲ. ಗ್ರಾಮದ ನೆಮ್ಮದಿ ಹಾಳಾಗುತ್ತಿರುವುದರಿಂದ ಬೇಸತ್ತಿದ್ದ ಗ್ರಾಮಸ್ಥರು ಇಂದು ಸಂಗೀತಾ ಅವರ ಮನೆಯ ಮೇಲೆ ತಾವೇ ದಾಳಿ ನಡೆಸಿ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಸಂಗೀತಾಳನ್ನು ಆಕೆಯ ಮನೆಯಲ್ಲಿಯೇ ಕೂಡಿ ಹಾಕಿ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಆನಂತರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಈ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಸಂಗೀತಾ ಎನ್ನುವ ಈ ಮಹಿಳೆ ಸಣ್ಣ ಸಣ್ಣ ಮಕ್ಕಳಿಗೂ ಕಳಪೆ ಗುಣಮಟ್ಟದ ಮದ್ಯ ಮಾರಾಟ ಮಾಡುತ್ತಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ಥಳಕ್ಕೆ ಬಂದ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯ ಹಾಗೂ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.