ರಸ್ತೆ ದಾಟುವ ವೇಳೆ ಬೈಕ್ ಗೆ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಬಿಎಸ್ಎಫ್ ಯೋಧ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಬಿಎಸ್ಎಫ್ ಯೋಧ ಮೌನೇಶ ರಾಠೋಡ್ (35) ಸಾವನ್ನಪ್ಪಿದ ದುರ್ದೈವಿ. ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸಮೇತ ಎಳೆದುಕೊಂಡು ಹೋಗಿ ಎದುರಿಗೆ ಬರುತ್ತಿದ್ದ ಅಂಬ್ಯುಲೆನ್ಸ್ ಗೆ ಲಾರಿ ಡಿಕ್ಕಿಯಾಗಿದೆ.

ಈ ಹಿನ್ನೆಲೆಯಲ್ಲಿ ಅಂಬ್ಯುಲೆನ್ಸ ಚಾಲಕ ಕೇರಳ ಮೂಲದ ರಿತೇಶ ಸ್ಥಿತಿ ಚಿಂತಾಜನಕವಾಗಿದೆ. ಕ್ರೆನ್ ಮೂಲಕ ಲಾರಿ ಅಂಬ್ಯುಲೆನ್ಸ್ ಬೇರ್ಪಡಿಸಿ ಚಾಲಕ ರಿತೇಶನನ್ನು ಪೊಲೀಸರು ಹೊರ ತೆಗೆದಿದ್ದಾರೆ. ಗಾಯಾಳು ರಿತೇಶ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದ ಎನ್ ಎಚ್ 50 ರಲ್ಲಿ ಘಟನೆ ನಡೆದಿದೆ. ಅಪಘಾತದ ಪರಿಣಾಮ ಎನ್ ಎಚ್ 50 ರಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಅಪಘಾತಕ್ಕೀಡಾದ ಲಾರಿ ಅಂಬ್ಯುಲೆನ್ಸ ಹಾಗೂ ಬೈಕ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಂಬ್ಯುಲೆನ್ಸ ಸಹಾಯಕನಿಗೆ ಹಾಗೂ ಲಾರಿ ಚಾಲಕ ಕ್ಲೀನರ್ ಗೂ ಸಣ್ಣ ಪುಟ್ಟ ಗಾಯಗಳಾಗಿವೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.