ವಿಜಯಪುರದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಐತಿಹಾಸಿಕ ಗೋಳಗುಮ್ಮಟದ ಎದುರು ಬಣ್ಣದಾಟ ಆಡಿದರು. ಯುವಕರು, ಮಹಿಳೆಯರು, ಮಕ್ಕಳು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಕಾಮ ದಹನ ಮರುದಿನ ನಡೆಯುವ ಬಣ್ಣದ ಹಬ್ಬದ ನಿಮಿತ್ತವಾಗಿ ಅನಕು ಶವಯಾತ್ರೆ ಮಾಡಿ ಜನರನ್ನ ರಂಜಿಸಿದರು. ಯುವಕನನ್ನ ಚಟ್ಟದ ಮೇಲೆ ಮಲಗಿಸಿ ಬೊಬ್ಬೆ ಇಟ್ಟು ರಂಜನೆ ನೀಡಿದರು. ಹೋಳಿ ಹಬ್ಬದಲ್ಲಿ ಈ ರೀತಿ ಯುವಕರು ಜನರನ್ನ ರಂಜಿಸೋದು ವಾಡಿಕೆ ಇದೆ.

ಇನ್ನೂ ವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲರ ಪುತ್ರ ಯುವ ಉದ್ಯಮಿ ಶಾಶ್ವತಗೌಡ ಪಾಟೀಲ ನೇತೃತ್ವದಲ್ಲಿ ರಂಗ ಬರಸೆ, ಸೋಲಾಪುರ ರಸ್ತೆಯಲ್ಲಿ ಶರತಗೌಡ ಪಾಟೀಲ ನೇತೃತ್ವದಲ್ಲಿ ರಂಗ್ ರೇವ್, ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ ನೇತೃತ್ವದಲ್ಲಿ ರಂಗ ಹೋಲಿಕ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಯುವಕ ಯುವತಿರು ರೇನ್ ಡ್ಯಾನ್ಸ್, ಡಿಜೆ ಸೌಂಡ್ ತಾಳಕ್ಕೆ ತಕ್ಕಂತೆ ಕುಣಿದು ನಲಿದಾಡಿದರು. ಇನ್ನೂ ಹಲವರು ಊರ ಹೊರಗಡೆ ಸೇರಿಕೊಂಡು ಆಪ್ತರು ಹಾಗೂ ಮಿತ್ರರ ಜೊತೆಗೆ ಬಣ್ಣದಾಟ ಆಡಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.