Belagavi

ವಿದ್ಯಾದಾನ,ಅನ್ನದಾನಕ್ಕೆ ಹೆಸರಾದ ಶೃಂಗೇರಿ ಪೀಠ

Share

ಮುಧೋಳ: ವಿದ್ಯಾ ದಾನ ಹಾಗೂ ಅನ್ನದಾನಕ್ಕೆ ಹೆಸರಾದ ಶೃಂಗೇರಿ ಶಾರದಾ ಪೀಠವು ದಕ್ಷಿಣಾಮ್ನಾಯಿ ಎಂದು ಖ್ಯಾತಿಹೊಂದಿದೆ. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪೀಠಗಳಲ್ಲಿ ಒಂದಾದ ಶೃಂಗೇರಿ ಪೀಠದ ಸಂಸ್ಕೃತ ಪಾಠಶಾಲೆ ಯನ್ನು ಜೀವನದಲ್ಲಿ ಒಂದು ಬಾರಿಯಾದರೂ ನೋಡಲೇ ಬೇಕು. ಅಂಥ ನೂರಾರು ಪಾಠಶಾಲೆಗಳನ್ನು ನಡೆಸುತ್ತಿರುವ ಶೃಂಗೇರಿ ಪೀಠವು ವಿದ್ಯಾದಾನ,ಅನ್ನದಾನ ಮಾಡವದರಲ್ಲಿ ಸದ್ದಿಲ್ಲದೇ ಕೆಲಸಮಾಡುತ್ತಿದೆ. ಇನ್ನು ನೂರಾರು ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸುವ ಕೆಲಸ ಮಾಡುತ್ತಿದೆ.

ಒಂದು ಸರ್ಕಾರ ಮಾಡುವ ಕೆಲಸವನ್ನು ನಮ್ಮ ದೇಶದ ಮಠ ಮಾನ್ಯಗಳು ಮಾಡುತ್ತಿರುವುದು ನಿಜಕ್ಕೂ ಗಮನಿಸುವ ವಿಷಯವಾಗಿದೆ. ಶಂಕಾರಾಚಾರ್ಯರು ದೇಶದಾದ್ಯಂತ ಸ್ಥಾಪಿಸಿದ ನಾಲ್ಕು ಪೀಠಗಳು ಧರ್ಮ ರಕ್ಷಣೆ ,ಧರ್ಮ ಜಾಗರಣೆ , ವಿದ್ಯಾ ಪ್ರಸಾರದ ಉದ್ದೇಶದಿಂದ ತಮ್ಮ ನಾಲ್ಕು ಜನ ಶಿಷ್ಯರನ್ನು ಪೀಠಾಧಿಪತಿಗಳಾಗಿ ನೇಮಿಸಿದರು. ಅಂಥ ಒಂದು ಪೀಠ ಕರ್ನಾಟಕದ ಶೃಂಗೇರಿ ಎಂಬುದು ಎಲ್ಲರೂ ಭಾಗ್ಯವಂತರು ಎಂದು ಹೆಮ್ಮೆ ಪಡುವಂಥ ವಿಚಾರವಾಗಿದೆ. ಮೊದಲ ಪೀಠಾಧಿಪತಿ ಗಳಾಗಿ ಸುರೇಶ್ವರಾಚಾರ್ಯರು ಆಚಾರ್ಯ ಶಂಕರರು ನೇಮಿಸಿದ ಮೊದಲ ಶಿಷ್ಯರು. ನಂತರ ಪೀಠ ಪರಂಪರೆ ಮುಂದುವರೆದು ಈಗಿನ ಪೀಠಾಧಿಪತಿಗಳಾದ ಭಾರತೀತೀರ್ಥ ಮಹಾಸನ್ನಿಧಾನಂಗಳವರು 36 ನೇ ಪೀಠಾಧಿಪತಿಗಳಾಗಿದ್ದು, ಅವರ ಕರಕಮಲ ಸಂಜಾತರಾದ ವಿಧುಶೇಖರ ಸನ್ನಿಧಾನಂಗಳವರು 37ನೇ ಪೀಠಾಧಿಪತಿ ಗಳಾಗಲಿದ್ದಾರೆ.

ಅಂಥ ಒಂದು ವಿಶೇಷವಾದ ಗುರು ಪರಂಪರೆಯನ್ನು ಹೊಂದಿದ ಶಂಕರಾಚಾರ್ಯರ ಪೀಠ. ಇಂದು ದೇಶದಲ್ಲಿ ಧರ್ಮ ರಕ್ಷಣೆ ಯೊಂದಿಗೆ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆ, ವಿದ್ಯಾ ದಾನ ಅನ್ನದಾನಗಳಂಥ ಕೈಂಕರ್ಯ ಗಳಿಗೆ ಹೆಸರಾಗಿದೆ. ಯುವ ಪೀಠಾಧಿಪತಿಗಳಾಗಿರುವ ವಿದುಶೇಖರ ಭಾರತೀ ಸನ್ನಿಧಾನಂಗಳವರು ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿಯೂ ಶಂಕರ ಮಠ ಸ್ಥಾಪಿಸಿ ಅಲ್ಲಿ ಸಂಸ್ಕೃತ ಪಾಠಶಾಲೆಗಳ ಪ್ರಾರಂಭಕ್ಕೆ ಒತ್ತು ನೀಡಿದ್ದಾರೆ. ಅಂಥ ಒಂದು ಶಂಕರ ಮಠ ಮುಧೋಳದಲ್ಲಿ ಇದೇ ಸಂಧರ್ಭದಲ್ಲಿ ಶ್ರೀಗಳಿಂದ ಭೂಮಿಪೂಜೆಯೊಂದಿಗೆ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ.
ಇನ್ನೂ ಹತ್ತಾರು ಧರ್ಮ ಪ್ರಸಾರದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅಂಥ ಮಹಾನ್ ಸಂತರೊಬ್ಬರು ಮುಧೋಳ ನಗರಕ್ಕೆ ಸೋಮವಾರ ಆಗಮಿಸಲಿದ್ದಾರೆ.

ಮುಧೋಳ ದಲ್ಲಿ ಶೋಭಾಯಾತ್ರೆ. ಶೃಂಗೇರಿ ಪೀಠದ ಪೀಠಾಧಿಪತಿಗಳಾದ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಕರಕಮಲ ಸಂಜಾತರಾದ ವಿಧುಶೇಖರ ಭಾರತಿ ಸನ್ನಿಧಾನಂಗಳವರು ಸೋಮವಾರ ಸಂಜೆ 4.30 ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ನಗರದ ವೆಂಕಟೇಶ್ ಮಂದಿರದಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಪುರಪ್ರವೇಶ ಮಾಡಲಿರುವ ಶ್ರೀಗಳನ್ನು ವಿವಿಧ ವಾದ್ಯ, ಸಂಗೀತ, ವೇದ ಘೋಷ, ಕೋಲಾಟ ಸೇರಿದಂತೆ ಭವ್ಯ ಶೋಭಾಯಾತ್ರೆ ಯೊಂದಿಗೆ ಗುರು ದತ್ತ ಮಂದಿರಕ್ಕೆ ಕರೆತರಲಾಗುವುದು. ನಂತರ ಅಲ್ಲಿ ಧೂಳೀ ಪಾದಪೂಜೆ, ಸಭಾ ಕಾರ್ಯಕ್ರಮ, ಚಂದ್ರಮೌಳೀಶ್ವರ ಪೂಜೆ ನಡೆಯುವುದು.

ಮಂಗಳವಾರ ಬೆಳಿಗ್ಗೆ ಶಿಷ್ಯರಿಗೆ ಪಾಠ, ಪ್ರವಚನ ನಂತರ ಚಂದ್ರಮೌಳೀಶ್ವರ ಪೂಜೆ, ಸಭಾ ಕಾರ್ಯಕ್ರಮದಲ್ಲಿ ಕಲ್ಯಾಣ ವೃಷ್ಟಿ ಪಾರಾಯಣ ರೂಪಕ ಸಮರ್ಪಣೆ, ಆಶೀರ್ವಚನ, ಫಲ ಮಂತ್ರಾಕ್ಷತೆ ವಿತರಣೆ , ತೀರ್ಥ ಪ್ರಸಾದ ಕಾರ್ಯಕ್ರಮದ ನಂತರ ಸಮಾಪ್ತಿಯಾಗುವದು. ಅಂಥ ಶ್ರೇಷ್ಠ ಪೀಠದ ಯತಿಗಳು ಆಗಮಿಸುವ ಈ ಸಂಧರ್ಭದಲ್ಲಿ ಅವರ ದರ್ಶನ ಪಡೆದು ಕೃತಾರ್ಥರಾಗಬೇಕೆಂಬುದೇ ನಮ್ಮ ಕಳಕಳಿ ಎಂದು ರಾಜು ಜೋಶಿ ತಿಳಿಸಿರುತ್ತಾರೆ.

Tags:

error: Content is protected !!