ಕಾಗವಾಡ: ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಇವರು ವಿಧಾನಸಭೆಯಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಇವರು ನನಗೆ ಅವಮಾನ ಮಾಡಿದ್ದಾರೆ ಎಂದು ಹೇಳಿ ಹಕ್ಕು ಚ್ಯುತಿ ಮಂಡನೆ ಮಾಡಿದ್ದಾರೆ. ಕಾಗವಾಡದಲ್ಲಿ ಪ್ರಜಾಸೌಧ ಕಟ್ಟಡ ಕಟ್ಟಲು ನಿಶ್ಚಿತಗೊಳಿಸಿದ್ದ ಸ್ಥಳದಲ್ಲಿ ಕಟ್ಟಡ ಕಟ್ಟಲು ಅವರು ವಿಚಾರ ವ್ಯಕ್ತಪಡಿಸಿದರು.

ಕಾಗವಾಡದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಿಸುವ ಸ್ಥಳದಲ್ಲಿ ಕೆರೆ ಇದೆ ಎಂದು ಅಧಿಕಾರಿಗಳು ತಪ್ಪು ಮಾಹಿತಿ ಸರಕಾರಕ್ಕೆ ನೀಡಿದ್ದಾರೆ. ಈ ಸ್ಥಳದಲ್ಲಿ ಕೆರೆ ಇಲ್ಲ, ಕೆರೆ ದಾಖಲೆಯೂ ಇಲ್ಲ. ಆಯ್ಕೆ ಮಾಡಿದ ಸ್ಥಳ ಕಾಗವಾಡದ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿರುವ ಹಾಗೂ ಕಾಗವಾಡದ ಹಾರ್ಟ್ ಆಫ್ ಸಿಟಿ ಎಂದು ಗುರುತಿಸಲಾಗಿದೆ. ಶಾಸಕ ರಾಜು ಕಾಗೆ ಸರಕಾರಕ್ಕೆ ಕೇಳುತ್ತಿರುವ ಮಾಹಿತಿ ಸೂಕ್ತವಾಗಿದೆ ಎಂದು ಕಾಗವಾಡದ ವಿದ್ಯಾವರದಕ
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜ್ಯೋತಿಕುಮಾರ ಪಾಟೀಲ ಹೇಳಿದರು.
ಕಾಗವಾಡದಲ್ಲಿ ಪ್ರಜಾಸೌಧ ಕಟ್ಟಿಸುವ ಸ್ಥಳದ ಆಯ್ಕೆ ಸರಿಯಾಗಿದ್ದು, ಇದೇ ಸ್ಥಳದ ಪಕ್ಕದಲ್ಲಿ ಬಸ್ ನಿಲ್ದಾಣ, ನ್ಯಾಯಾಲಯ, ಸರ್ಕಾರಿ ಶಾಲೆಗಳು ಎಲ್ಲ ಇದೇ ಪರಿಸರದಲ್ಲಿದ್ದು ಇಲ್ಲಿಗೆ ಕಟ್ಟಡ ಕಟ್ಟಲು 8.60 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಸರ್ಕಾರ ಇಲ್ಲಿಗೆ ಕಟ್ಟಡ ಕಟ್ಟಲು ಅನುಮತಿ ನೀಡಿದರೆ ಬಹಳಷ್ಟು ಸೂಕ್ತವಿದೆ.
ಶಾಸಕ ರಾಜು ಕಾಗೆ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಇಲ್ಲಿಗೆ ಕಳೆದ ಅನೇಕ ವರ್ಷಗಳ ಬಳಿಕ ಎಲ್ಲ ಇಲಾಖೆಯ ಕಚೇರಿಗಳು ಒಂದೇ ಸ್ಥಳದಲ್ಲಿ ಪ್ರಾರಂಭಿಸುವ ವ್ಯವಸ್ಥೆವಾಗಲಿದೆ. ಇದಕ್ಕೆ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಇಲಾಖೆ ಸಚಿವರು ಹೆಚ್ಚಿನ ಆಸಕ್ತಿ ತೋರಿ ಶಾಸಕ ರಾಜು ಕಾಗೆ ಇವರು ಕೇಳಿರುವ ಪ್ರಜಾಸೌಧ ಕಟ್ಟಡಕ್ಕೆ ಅನುಮತಿ ನೀಡಲೇಬೇಕೆಂದು ಕೇಳಿಕೊಂಡರು.
ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಇವರು ಶಾಸಕ ರಾಜು ಕಾಗೆ ಇವರಿಗೆ ಅವಮಾನ ಮಾಡಿದ್ದಾರೆ ಎಂದು ಶಾಸಕರು ಅವರ ಮೇಲೆ ಹಕ್ಕು ಚ್ಯುತಿ ಮಂಡನೆ ಮಾಡಿದ್ದರಿಂದ ವಿಧಾನ ಮಂಡಳದಲ್ಲಿಯ ಸುಮಾರು 60 ಶಾಸಕರು, ವಿರೋಧಪಕ್ಷ ನಾಯಕರು ಎಲ್ಲರೂ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ. ಇದು ಸತ್ಯವಿದೆ ಎಂದು ಹೇಳಿದರು.
ಈ ವೇಳೆ ರೈತ ಸೇವಾ ಸಂಸ್ಥೆಯ ಅಧ್ಯಕ್ಷ ಶಾಂತಿನಾಥ ಕರವ, ಮರಾಠಾ ಸಮಾಜದ ಉಪಾಧ್ಯಕ್ಷ ಬಾಳು ಜಾಧವ ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ,
ಇನ್ ನ್ಯೂಸ್, ಕಾಗವಾಡ.