ಬೆಳಗಾವಿ ಜಿಲ್ಲೆಯಲ್ಲಿ ಮತ್ತೇ ಒಬ್ಬಂಟಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಸವದತ್ತಿ ಎಲ್ಲಮ್ಮನ ಸನ್ನಿಧಾನದ ಪಕ್ಕದಲ್ಲೇ ಪೊಲೀಸರ ಎದುರೇ ನಾಗರೀಕ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದಲ್ಲಿ ಒಬ್ಬಂಟಿ ಮಹಿಳೆ ವಿವಸ್ತ್ರಗೊಳಿಸಿ ಪೊಲೀಸರ ಎದುರೇ ನಡೆಯಿತಾ ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ನಡೆದಿದೆ. 10ಎಕರೆ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅತ್ತಿಗೆ ಮತ್ತು ನಾದಿನಿಯ ಕುಟುಂಬದ ನಡುವೆ ಈ ವಿವಾದ ನಡೆದಿದೆ. ರೈತ ಸಂಘದ ಹೆಸರಿನಲ್ಲಿ ಹದಿನೈದಕ್ಕೂ ಅಧಿಕ ಜನರಿಂದ ಒಂಟಿ ಮಹಿಳೆ ಮೇಲೆ ದಾಳಿ ಮಾಡಿದ ಆರೋಪ ಕೇಳಿಬಂದಿದೆ. ವಾದ ವಿವಾದವಾಗಿ ಮೊಬೈಲ್ ಕಿತ್ತುಕೊಂಡು ಕಂಡಕಂಡಲ್ಲಿ ಒದ್ದು ಹಲ್ಲೆ ಮಾಡಲಾಗಿದೆ. ಗರ್ಭಕೋಶಕ್ಕೆ ಪೆಟ್ಟಾಗಿ ರಕ್ತಸ್ರಾವಾದರೂ ಬಿಡದೇ ಬಟ್ಟೆ ಹರಿದು ಹಲ್ಲೆ ನಡೆಸಲಾಗಿದೆ.
ಅತ್ತಿಗೆ ಮತ್ತು ನಾದಿನಿಯ ಜಮೀನು ವಿವಾದ ನ್ಯಾಯಾಲಯ ಮೆಟ್ಟಿಲೇರಿದ್ದು, ನಾದಿನಿ ನಕಲಿ ದಾಖಲೆ ಸೃಷ್ಟಿಸಿದ ಹಿನ್ನೆಲೆ ನ್ಯಾಯಾಲಯವು ವಿಚಾರಣೆ ಪೂರ್ಣಗೊಳ್ಳುವವರೆಗೂ ನಾದಿನಿಗೆ ಜಮೀನು ಬಳಸದಂತೆ ತಡೆಯಾಜ್ಞೆಯನ್ನು ನೀಡಿದೆ. ರೈತ ಸಂಘದವರೆಂದು ಹೇಳಿ ಬಂದ ಜನರು ಜಮೀನಿನಲ್ಲಿ ಬೆಳೆದ ಕಡಲೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜಮೀನಿನಿಂದ ತಕ್ಷಣ ರಸ್ತೆಗೆ ಬಂದು 112 ಗೆ ಕರೆ ಮಾಡಿದಾಗ ಶೀಘ್ರದಲ್ಲೇ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರು ಬಂದರೂ ಕೂಡ ಅವರ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಲ್ಲಿ ಹೊಟ್ಟೆಗೆ ಹೊಡೆದ ಕಾರಣ ತೀವ್ರ ರಕ್ತಸ್ರಾವವಾಗಲಾರಂಭಿಸಿತು. ಆಂಬ್ಯುಲೆನ್ಸ್ ಕೂಡ ಬರದ ಹಿನ್ನೆಲೆ ಖಾಸಗಿ ವಾಹನ ಲಿಫ್ಟ್ ಪಡೆದು ಸ್ಥಳೀಯ ಆಸ್ಪತ್ರೆಗೆ ಹೋದಾಗ ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಆಸ್ಪತ್ರೆಗೆ ರವಾನಿಸಿದರು.
ಇನ್ನು ಇರುವ 30 ಎಕರೆಯಲ್ಲಿ 20 ಎಕರೆ ಇಟ್ಟುಕೊಂಡು 10 ಎಕರೆ ನಮಗೆ ನೀಡಿ ಎಂದರು ಕೂಡ ನಾದಿನಿಯರು ಒಪ್ಪುತ್ತಿಲ್ಲ. ಇದೇ ವಿವಾದಕ್ಕೆ ನನ್ನ ಪತಿ ಮದುವೆಯಾದ ಒಂದು ವರ್ಷದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪಜೀವನಕ್ಕೆ ಜಮೀನು ಬಿಟ್ಟರೇ ಬೇರ್ಯಾವ ಮೂಲವು ಇಲ್ಲ. ಹಲ್ಲೆ ನಡೆಸಿದರೂ ಕೂಡ ಪೊಲೀಸರು ಪ್ರತ್ಯಕ್ಷ ಸಾಕ್ಷಿಯಿಲ್ಲದೇ ಎಫ್.ಐ.ಆರ್. ದಾಖಲಿಸುವುದಿಲ್ಲ ಎನ್ನುತ್ತಿದ್ದಾರೆ. ಐ.ಜಿ ಅವರು ಕರೆ ಮಾಡಿ ಎಫ್.ಐ.ಆರ್. ದಾಖಲಿಸಲೂ ಹೇಳಿದರೂ ಕೂಡ ಸವದತ್ತಿ ಠಾಣೆಯ ಸಿಪಿಐ ಧರ್ಮಟ್ಟಿ ಅವರು ದಾಖಲಿಸಿಕೊಂಡಿಲ್ಲ ಎಂದು ಸಂತ್ರಸ್ತ ಮಹಿಳೆ ರತ್ನಾ ಅಣ್ಣಪ್ಪ ಪಟ್ಟಣಶೆಟ್ಟಿ ದೂರಿದರು.
ಒಟ್ಟಾರೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಜಿಲ್ಲೆಯಲ್ಲಿ ಮತ್ತೊಮ್ಮೆ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲ್ಲೆ ನಡೆಸಲಾಗಿದ್ದು, ಪೊಲೀಸರು ಎಫ್.ಐ.ಆರ್. ದಾಖಲಿಸಿಕೊಳ್ಳದಿರುವುದು ತೀವ್ರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.