ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ)ಯ ಹಂತಗಳನ್ನು ಪರಿಗಣಿಸದೇ ಈಗ ನಿರ್ಮಾಣಗೊಂಡಿರುವ ಪ್ರತಿ ಯೋಜನೆಗಳ ಕಾಲುವೆಗಳಿಗೆ ಸಮನಾಗಿ ನೀರು ಹಂಚಿಕೆ ಮಾಡಬೇಕು. ನೀರಾವರಿ ಪ್ರದೇಶ ವಿಸ್ತರಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ರೈತರು ಪ್ರತಿಭಟನೆ ನಡೆಸಿದರು. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ ಗ್ರಾಮದ ಚಂದ್ರಗಿರಿಯ ಚಂದ್ರಮ್ಮಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣಿಗೆ ಆರಂಭಿಸಿದ ನೂರಾರು ಜನರು, ನೀರು ಬೇಕು ಎಂಬ ಘೋಷಣೆ ಕೂಗಿದರು. ನಂತರ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಂಜೆಯವರೆಗೂ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ‘ಆಲಮಟ್ಟಿಯ ಕೃಷ್ಣಾ ನದಿಯಿಂದ ಕೇವಲ 10 ಕಿ.ಮೀ. ಅಂತರದಲ್ಲಿರುವ ಅಂಗಡಗೇರಿ, ವಂದಾಲ, ತೆಲಗಿ, ಕವಲಗಿ, ಗೊಳಸಂಗಿ, ಚಿಮ್ಮಲಗಿ, ಸೇರಿದಂತೆ ನಾನಾ ಗ್ರಾಮಗಳು ನೀರಾವರಿಯಿಂದ ವಂಚಿತಗೊಂಡಿವೆ. ಮಸೂತಿ ಕಾಲುವೆಯಿಂದ ಈ ಎಲ್ಲಾ ಭಾಗಗಳಿಗೆ ನೂತನ ಕಾಲುವೆಗಳ ಜಾಲ ನಿರ್ಮಿಸಿದರೇ ಸುಮಾರು 50 ಸಾವಿರಕ್ಕೂ ಅಧಿಕ ಎಕರೆ ಭೂಮಿ ನೀರಾವರಿಗೊಳಗಾಗುತ್ತದೆ. ಕೃಷ್ಣಾ ತೀರದಲ್ಲಿದ್ದರೂ ನೀರಾವರಿಯಿಂದ ಈ ಗ್ರಾಮಗಳು ವಂಚಿತಗೊಂಡಿವೆ’ ಎಂದರು.
ಯುಕೆಪಿ ಮೂರನೇ ಹಂತದ ಕಾಲುವೆಗಳ ಜಾಲ ನಿರ್ಮಾಣಗೊಂಡಿದೆ. ಅದರ ಮೂಲಕ ಕೆರೆಗಳ ಭರ್ತಿ ನಡೆಯುತ್ತದೆ, ಯುಕೆಪಿ ಒಂದು ಮತ್ತು ಎರಡನೇ ಹಂತದ ಕಾಲುವೆಗಳಿಗೆ ಹೆಚ್ಚು ನೀರು ಹರಿಸಲಾಗುತ್ತದೆ. ನೀರು ಹಂಚಿಕೆಯನ್ನು ಮರುಪರಿಷ್ಕರಿಸಿ ಎಲ್ಲಾ ಯೋಜನೆಗಳ ಕಾಲುವೆಗಳಿಗೆ ಸಮನಾಗಿ ನೀರು ಹರಿಸಬೇಕು’ ಎಂದು ಬೆಳ್ಳುಬ್ಬಿ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆಲಮಟ್ಟಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಸೂಪರಿಂಟೆಂಡಿಂಗ್ ಎಂಜಿನಿಯರ್ ವಿ.ಆರ್.ಹಿರೇಗೌಡರ, ಸುಧೀರ ಸಜ್ಜನ, ಹೋರಾಟಗಾರರಿಂದ ಮನವಿ ಸ್ವೀಕರಿಸಿ, ತಕ್ಷಣವೇ ಬೇಡಿಕೆಗಳ ಬಗ್ಗೆ ಎಂಡಿ ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.