Banglore

ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ದೋಸ್ತಿಗಳಿಂದ ಪ್ರತಿಭಟನೆ: ರಾಜ್ಯಪಾಲರಿಗೆ ದೂರು

Share

ಗ್ಯಾರಂಟಿ ಅನುಷ್ಠಾನ ಸಮಿತಿ ವಿರೋಧಿಸಿ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದಸ್ಯರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.ಗ್ಯಾರಂಟಿ ಅನುಷ್ಠಾನ ಸಮಿತಿ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜನರ ತೆರಿಗೆ ಹಣ ನೀಡುತ್ತಿದೆ ಎಂದು ಆರೋಪಿಸಿ, ಬಿಜೆಪಿ-ಜೆಡಿಎಸ್ ಸದಸ್ಯರು ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು. ಸದನದಲ್ಲಿ ಪ್ರತಿಭಟನೆ ಮುಂದುವರೆಸಿದ ದೋಸ್ತಿಗಳು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆಯೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಧರಣಿ ನಡೆಸಿದರು.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಪಕ್ಷದ ಉಭಯ ಸದನ ಸದಸ್ಯರು, ಸರ್ಕಾರ ತೆರಿಗೆ ಹಣ ದುರುಪಯೋಗ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ”ಸರ್ಕಾರದ ದುಡ್ಡನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ಸರ್ಕಾರದ ಹಣವನ್ನು ಖರ್ಚು ಮಾಡುವ ಬದಲಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮನೆಯ ಮುಂದೆ ಭಿಕ್ಷೆ ಬೇಡಲಿ. ಕಾಂಗ್ರೆಸ್ ಹಗಲು ದರೋಡೆ ಮಾಡುತ್ತಿದೆ. ಗ್ಯಾರಂಟಿ ಅನುಷ್ಠಾನ ಸಮಿತಿಯ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕಚೇರಿ, ವೇತನ ನೀಡಲಾಗುತ್ತಿದೆ.

ಸರ್ಕಾರದ ಯೋಜನೆಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸಂಬಳ ಕೊಡಲಾಗುತ್ತಿದೆ. ಹೀಗಿರುವಾಗ ಗ್ಯಾರಂಟಿ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ ಏಕೆ” ಎಂದು ಪ್ರಶ್ನಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ”ಅಂಗನವಾಡಿ ಕಾರ್ಯಕರ್ತರರು, ಶಿಕ್ಷಕರಿಗೆ ಗೌರವ ಧನ ಹೆಚ್ಚಳ ಮಾಡಲಾಗುತ್ತಿಲ್ಲ. ಆಶಾ ಕಾರ್ಯಕರ್ತೆಯರಿಗೂ ಗೌರವ ಧನ ಹೆಚ್ಚಳ ಮಾಡುತ್ತಿಲ್ಲ. ಹೀಗಿರುವಾಗ, ಗ್ಯಾರಂಟಿ ಅನುಷ್ಠಾನ ಸಮಿತಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ವೇತನ ನೀಡುತ್ತಿದೆ. ಜನರ ತೆರಿಗೆ ಹಣ ಪೋಲು ಮಾಡಿ ಕಾಂಗ್ರೆಸ್ ಪುಡಾರಿಗಳಿಗೆ ಹಣ ನೀಡಲಾಗುತ್ತಿದೆ” ಎಂದು ಕಿಡಿಕಾರಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ”ಸಮಿತಿ ರದ್ದು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರೂ ಹಿಂದಕ್ಕೆ ಪಡೆಯುವ ಪ್ರಶ್ನೆ ಇಲ್ಲ ಎಂದು ಹೇಳುತ್ತಿದೆ. ಜನರ ತೆರಿಗೆ ಹಣವನ್ನು ಕಾರ್ಯಕರ್ತರಿಗೆ ಕೊಡುವ ಅಗತ್ಯತೆ ಏನಿದೆ?. ಸರ್ಕಾರಿ ನೌಕರರಿಗೆ ವೇತನ ಕೊಡಲು ಹಣ ಇಲ್ಲ, ಹೀಗಿರುವಾಗ ಕಾರ್ಯಕರ್ತರಿಗೆ ಹಣ ಕೊಡಲಾಗುತ್ತಿದೆ. ಕೂಡಲೇ ಸಮಿತಿ ರದ್ದು ಮಾಡಬೇಕು” ಎಂದು ಆಗ್ರಹಿಸಿದರು.ಪ್ರತಿಭಟನೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಲ್ನಡಿಗೆ ಮೂಲಕ ರಾಜಭವನಕ್ಕೆ ತೆರಳಿದರು. ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿ ಬಿಜೆಪಿ ಮತ್ತು‌ ಜೆಡಿಎಸ್ ಸದಸ್ಯರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದರು.

Tags:

error: Content is protected !!