ರಾಯಬಾಗ ಪಟ್ಟಣದಲ್ಲಿ ಕುರಿಗಾಯಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ಪರಮಾನಂದ ಮಂಗಸೂಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮದ ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಕುರಿಗಾಹಿಗಳ ರಕ್ಷಣೆಗೆ ಅವರಿಗೆ ಕೂಡಲೆ ಬಂದೂಕು ತರಬೇತಿ ನೀಡಿ ಬಂದೂಕು ಚಲಾವಣೆ ಲೈಸೆನ್ಸ್ ಒದಗಿಸಬೇಕೆಂದು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲ್ಲೂಕ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಿಂದ ಪಾದಯಾತ್ರೆ ನಡೆಸಿ ಅಭಾಜಿ ವೃತ್ತದ ಬಳಿ ಪ್ರತಿಭಟನೆ ಮಾಡುವ ಮೂಲಕ ಉಪ ತಹಶೀಲ್ದಾರ್ ಪರಮಾನಂದ ಮಂಗಸೂಳಿ ಅವರ ಮುಖಾಂತರ ಮನವಿ ಸಲ್ಲಿಸಿದರು. ಬಳಿಕ ಸಮಾಜದ ಮುಖಂಡ ಏಕನಾಥ ಮಾಚಕನೂರ ಮಾತನಾಡಿ, ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ.
ಬಾದಾಮಿ ತಾಲ್ಲೂಕಿನ ಉಗಲವಾಟ ಗ್ರಾಮ ಕುರಿಗಾಯಿ ಶರಣಪ್ಪ ಜಮ್ಮನಕಟ್ಟಿ ಅವರನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮೃತರ ಕುಟುಂಬಕ್ಕೆ ಸರಕಾರ ಕೂಡಲೆ 25ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸಿದರು. ಜಕನೂರಿನ ಡಾ.ಮಾಧುಲಿಂಗ ಮಹಾರಾಜರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಪ್ರಣಯ ಪಾಟೀಲ, ಪ.ಪಂ.ಅಧ್ಯಕ್ಷ ಅಶೋಕ ಅಂಗಡಿ, ಸಿಪಿಐ ಬಿ.ಎಸ್ ಮಂಟೂರ, ಡಾ.ಎಸ್.ಎಂ. ಪಾಟೀಲ, ಕರ್ನಾಟಕ ಕುರುಬರ ಸಂಘದ ಅಧ್ಯಕ್ಷ ಶಿವಪುತ್ರ ಹಾಡಕಾರ, ಸದಾನಂದ ಹಳಿಂಗಳಿ, ಗೋಪಾಲ ಕೋಚೇರಿ, ಮಹಾದೇವ ಶಿರಗೊರೆ, ಗಣೇಶ ಕಾಂಬಳೆ, ಅಮಿತ ಹೊಂಕಳೆ, ಭರಮಾ ಮಾಚಕನೂರ, ರವಿ ತರಾಳ, ಬಾದಶಾ ಡಾಂಗೆ, ಫಿರೋಜ ಮುಲ್ಲಾ ಸೇರಿದಂತೆ ಇತರರು ಇದ್ದರು.