ಬೆಳಗಾವಿ ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್ ಆಗಿ ಮಂಗೇಶ್ ಪವಾರ್ ಹಾಗೂ ಉಪಮೇಯರ್ ಆಗಿ ವಾಣಿ ವಿಲಾಸ್ ಜೋಶಿ ಆಗಿ ಆಯ್ಕೆಯಾಗಿದ್ದಾರೆ ಎಂದು ಪ್ರಾದೇಶಿಕ ಆಯುಕ್ತ ಅಶೋಕ ಶೆಟ್ಟಣ್ಣವರ ಘೋಷಣೆ ಮಾಡಿದರು. ಶನಿವಾರ ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ ನೂತನ ಮೇಯರ್ ಹಾಗೂ ಉಪಮೇಯರ್ ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು.

ಮೇಯರ್ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿ ಮಂಗೇಶ ಪವಾರ್, ರಾಜು ಭಾತ್ಕಂಡೆ, ಮಾರುತಿ ಮೋದಗೇಕರ, ಶಾಹಿದ್ ಖಾನ್ ಪಠಾಣ್ ನಾಮಪತ್ರ ಸಲ್ಲಿಸಿದ್ದರು. ರಾಜು ಬಾತ್ಕಾಂಡೆ, ಶಾಹಿದ್ ಖಾನ್ ಪಠಾಣ್ ನಾಮಪತ್ರ ಹಿಂಪಡೆದರು. ಮಾರುತಿ ಮೋದಗೇಕರ್ ವಿರುದ್ಧ ಮಂಗೇಶ್ ಪವಾರ್ 40 ಮತ ಪಡೆದ ಹಿನ್ನೆಲೆಯಲ್ಲಿ ಅವರನ್ನು ಮೇಯರ್ ಆಗಿ ಘೋಷಣೆ ಮಾಡಿದರು. ಉಪಮೇಯರ್ ಸ್ಥಾನಕ್ಕೆ ವಾಣಿ ವಿಲಾಸ್ ಜೋಶಿ ಹಾಗೂ ಲಕ್ಷ್ಮೀ ಲೋಕರಿ ನಡುವೆ ಸ್ಪರ್ಧೆಯಲ್ಲಿ ವಾಣಿ ವಿಲಾಸ್ ಜೋಶಿ 40 ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆ ಮಾಡಿದರು.
ಚುನಾವಣೆ ಫಲಿತಾಂಶದ ಬಳಿಕ ಮಾತನಾಡಿದ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ನೂತನವಾಗಿ ಆಯ್ಕೆಯಾದ ಮೇಯರ್, ಉಪಮೇಯರ್ ಬೆಳಗಾವಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ನಗರದ ಜನರಿಗೆ ಮುಟ್ಟಿಸಿ ಉತ್ತಮ ಆಡಳಿತ ನಡೆಸುವಂತೆ ತಿಳಿಸಿದರು. ವಿಧಾನ ಪರಿಷತ್ತಿನ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ಪಾಲಿಕೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ನೂತನ ಮೇಯರ್, ಉಪಮೇಯರ್ ಶ್ರಮಿಸಬೇಕು ಎಂದರು.
ನೂತನ ಮೇಯರ್ ಮಂಗೇಶ್ ಪವಾರ್ ಮಾತನಾಡಿ, ಪಾಲಿಕೆಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಳಗಾವಿ ನಗರದ ಅಭಿವೃದ್ಧಿಗೆ ಶ್ರಮಿಸುವೆ ಎಂದರು. ಪಾಲಿಕೆ ಆಯುಕ್ತೆ ಶುಭ ಬಿ. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.