ಜಿಐಎಸ್ ಸರ್ವೆ ಕೈಕೊಳ್ಳುವ ಮೂಲಕ ಪಾಲಿಕೆಯ ಆಸ್ತಿ ತೆರಿಗೆಯನ್ನು ಹಾಗೂ ಇತರೆ ಆಂತರಿಕ ಸಂಪನ್ಮೂಲಗಳನ್ನು ಮುಂದಿನ ಎರಡು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸುವುದು, 2025-26ನೇ ಸಾಲಿನಲ್ಲಿ 24*7 ನಿರಂತರ ಕುಡಿಯುವ ನೀರಿನ ಸರಬರಾಜು ಕಾಮಗಾರಿಯನ್ನು ಪೂರ್ಣಗೊಳಿಸಿ ಎಲ್ಲ ವಾರ್ಡಗಳಿಗೂ 24*7 ನಿರಂತರ ಕುಡಿಯುವ ನೀರನ್ನು ಪೂರೈಸುವುದು, ಪ್ರತಿ ಮನೆಯಿಂದ ಶೇ.100 ರಷ್ಟು ವಿಂಗಡಿಸಿದ ಕಸ ಸಂಗ್ರಹಿಸಿ ಶೇ. 100 ರಷ್ಟು ಸಂಸ್ಕರಣೆ ಕೈಕೊಂಡು `ಕಸಮುಕ್ತ ನಗರ’ ವನ್ನಾಗಿಸುವುದು ಇತ್ಯಾದಿ ಮಹತ್ವದ ಗುರಿಯ ಅಂಶಗಳೊಡನೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 2025-26ನೇ ಸಾಲಿನ 1512.67 ಕೋಟಿ ರೂ. ಗಾತ್ರದ ಬಜೆಟ್ ಅನ್ನು ಇಂದು ನಡೆದ ಸಭೆಯಲ್ಲಿ ಹು-ಧಾ ಮಹಾನಗರ ಪಾಲಿಕೆ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮನಗುಂಡಿ ಮಂಡಿಸಿದರು.

ಪಿ.ಪಿ.ಪಿ. ಮಾದರಿಯಲ್ಲಿ ಎಲ್.ಇ.ಡಿ ಬೀದಿ ದೀಪಗಳನ್ನು ಅಳವಡಿಸುವ ಮೂಲಕ ನಗರ ಸೌಂದರ್ಯ ಹೆಚ್ಚಿಸಲು ಉದ್ದೇಶಿಸಲಾಗಿದೆಯಲ್ಲದೇ ಹು-ಧಾ.ಮ ಪಾಲಿಕೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗಾಗಿ ಮಂಟೂರು ರಸ್ತೆಯಲ್ಲಿ ಸುಮಾರು 320 ಮನೆಗಳ ಜಿ+3 ಮಾದರಿಯಲ್ಲಿ ಗೃಹ ನಿರ್ಮಾಣ ಮಾಡುತ್ತಿದ್ದು, 26 ಕೋಟಿ ರೂ.ಗಳ ಈ ಯೋಜನೆಯಡಿ 244 ಮನೆ ಪೂರ್ಣಗೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ಎಲ್ಲ ಮನೆ ಪೂರ್ಣಗೊಳಿಸಿ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಬಾಕಿ ಉಳಿದ ಕಾಮಗಾರಿಗಳ ಪೂರ್ಣಗೊಳಿಸಲು ಪ್ರಸ್ತುತ ಬಜೆಟ್‍ನಲ್ಲಿ 5 ಕೋಟಿ ರೂ. ಅನುದಾನ ಕಾಯ್ದಿರಿಸಲಾಗಿದೆ.
ರಾಜ್ಯ ಹಣಕಾಸು ಆಯೋಗದ ಎಸ್.ಎಫ್.ಸಿ. ಬಂಡವಾಳ ಸೃಜನೆಯಡಿ 2.8 ಕೋಟಿಗಳಷ್ಟು ಎಸ್.ಎಫ್.ಸಿ., ಎಸ್.ಸಿ.ಎಸ್.ಪಿ ಯಡಿ ಶೇ. 60 ರಷ್ಟು ಕಾಮಗಾರಿಗೆ 190.8 ಲಕ್ಷಗಳಷ್ಟು ಹಾಗೂ ಎಸ್.ಎಫ್.ಸಿ-ಟಿ.ಎಸ್.ಪಿ. ಯಡಿ ಶೇ. 60 ರ ಬಂಡವಾಳ ಸೃಜನೆಗೆ ಸುಮಾರು 78.6 ಲಕ್ಷ ರೂ.ಗಳಷ್ಟು ಅನುದಾನವನ್ನು ಕಾಯ್ದಿರಿಸಿದ್ದು, ಒಟ್ಟು 4.77 ಕೋಟಿಗಳಷ್ಟು ಅನುದಾನವನ್ನು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ.
ಪಾಲಿಕೆಯಲ್ಲಿ ವಿಲೀನಗೊಂಡ ಹಳ್ಳಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಕೊಳ್ಳುವ ಸಂಬಂಧ ಪ್ರಸ್ತುತ ವರ್ಷ ಸುಮಾರು 10 ಕೋಟಿ ರೂ. ಅನುದಾನ ಮೀಸಲಿರಿಸಿದ್ದು, ಪಾಲಿಕೆಯಲ್ಲಿ ವಿಲೀನಗೊಂಡಿರುವ ಎಲ್ಲ ಹಳ್ಳಿಗಳ ಅಭಿವೃದ್ದಿ ಪೂರಕ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಪಾಲಿಕೆಯ ಒಟ್ಟು 868.23 ಕೋಟಿ ರೂ.ಗಳಷ್ಟು ರಾಜಸ್ವ ಸ್ವೀಕೃತಿ, 575.63 ಕೋಟಿಗಳಷ್ಟು ಬಂಡವಾಳ ಸ್ವೀಕೃತಿ, 68.81 ಕೋಟಿಗಳಷ್ಟು ಅಸಾಮಾನ್ಯ ಸ್ವೀಕೃತಿಗಳನ್ನು ಅಂದಾಜಿಸುತ್ತಿದ್ದು, ಎಲ್ಲ ಯೋಜನೆಗಳನ್ನು ಒಳಗೊಂಡಂತೆ ಒಟ್ಟು 984.29 ಕೋಟಿಗಳಷ್ಟು ಬಂಡವಾಳ ವೆಚ್ಚಕ್ಕಾಗಿ ಕಾಯ್ದಿರಿಸಿದೆ. ಇವುಗಳಿಂದ ಪ್ರಸಕ್ತ ಸಾಲಿನ ಆಯವ್ಯಯ ಗಾತ್ರ ಒಟ್ಟಾರೆ 1512.67 ಕೋಟಿಗಳಷ್ಟು ತಲುಪಿದೆ.