ಚಿಕ್ಕೋಡಿ: ತಾಲೂಕಿನ ಕರೋಶಿ ಗ್ರಾಮದ ಯೋಧ ನಿಂಗಪ್ಪ ಈರಪ್ಪ ಸಿಂಗಾಯಿ 21 ವರ್ಷಗಳ ಕಾಲ ದೇಶ ಸೇವೆಯನ್ನು ಸಲ್ಲಿಸಿ,ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು.

ಗ್ರಾಮದ ಬಸ್ ನಿಲ್ದಾಣದಿಂದ ಹಿಡಿದು ಪ್ರಮುಖ ರಸ್ತೆಗಳಲ್ಲಿ ನಿವೃತ್ತ ಯೋಧನನ್ನು ತೆರೆದ ವಾಹನದಲ್ಲಿ ಸಕಲವಾದ್ಯಮೆಳದೊಂದಿಗೆ ಪುಷ್ಪವೃಷ್ಠಿಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ನಿವೃತ್ತ ಯೋಧರಾದ ನಿಂಗಪ್ಪ ಗ್ರಾಮದ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದವನ್ನು ಪಡೆದುಕೊಂಡರು.
ಗ್ರಾಮದ ಮುಖಂಡರು ನಿಂಗಪ್ಪ ಸಿಂಗಾಯಿ ಅವರನ್ನು ಮಾಲಾರ್ಪಣೆಯನ್ನು ಮಾಡಿ ಅತ್ಯಂತ ಗೌರವಯುತವಾಗಿ ಬರಮಾಡಿಕೊಂಡರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಮಹೇಶ್ ಭಾತೆ ಅವರು ನಮ್ಮ ದೇಶಕ್ಕೆ ಸೈನಿಕರ ಕೊಡುಗೆ ಅಪಾರವಾಗಿದೆ. ದೇಶದ ಸೈನಿಕರು ಹಗಲು ರಾತ್ರಿ ಎನ್ನದೆ ಗಡಿಯನ್ನು ಕಾಯುತ್ತಿರುವ ಹಿನ್ನೆಲೆಯಲ್ಲಿ ನಾವು ಇಲ್ಲಿ ಸುರಕ್ಷಿತವಾಗಿ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರು. ಇವತ್ತು ನಮ್ಮ ಗ್ರಾಮದ ನಿಂಗಪ್ಪ ಸಿಂಗಾಯಿ ಅವರು ಕಳೆದ 21 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅವರ ಮುಂದಿನ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.
ಬಳಿಕ ನಿವೃತ್ತ ಯೋಧ ನಿಂಗಪ್ಪ ಸಿಂಗಾಯಿ ಮಾತನಾಡಿ ಅತ್ಯಂತ ಬಡತನ ಪರಿಸ್ಥಿತಿಯಲ್ಲೂ ಕೂಡ ದೇಶ ಸೇವೆ ಮಾಡಬೇಕೆಂಬ ಮಹಾದಾಶೆಯಿಂದ ಸೈನ್ಯಕ್ಕೆ ಸೇರ್ಪಡೆಯಾಗಿದ್ದೆ.ನನ್ನ 21 ವರ್ಷಗಳ ಕಾಲದ ದೇಶದ ಸೇವೆ ಬಹಳಷ್ಟು ಖುಷಿ ತಂದಿದೆ.ಇವತ್ತು ಗ್ರಾಮಸ್ಥರು ಇಷ್ಟೊಂದು ಅದ್ದೂರಿಯಾಗಿ ಸ್ವಾಗತಿಸಿಕೊಂಡಿರುವುದು ಜೀವನದಲ್ಲಿ ಮರೆಯಲಾರದ ಸಂಗತಿ ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ದುಂಡಪ್ಪ ಬೆಂಡವಾಡೆ,ಬಾಳು ಮುಗಳಿ,ಅಜೀತ ಸಿಂಗಾಯಿ,ಸಾಮು ಪುಟಗುಡೆ,ಸಂತೋಷ ಜುಗುಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.