ಚಿಕ್ಕೋಡಿ-“ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯನ್ನು ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಿ, 17 ಗ್ರಾಮಗಳ 16 ಸಾವಿರ ಎಕರೆ ಜಮೀನಿಗೆ ನೀರು ಹರಿಸಲಾಗುವುದು. ರೈತ ಬಾಂಧವರು ಸಹಕರಿಸಬೇಕು” ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.

ತಾಲ್ಲೂಕಿನ ಶಿರಗಾಂವ ಗ್ರಾಮದಲ್ಲಿ 22 ಕೋಟಿ ರೂ. ಮೊತ್ತದ ಡಾ. ಬಿ ಆರ್ ಅಂಬೇಡ್ಕರ ಬಾಲಕಿಯರ ವಸತಿ ಶಾಲೆಯ ಶಂಕುಸ್ಥಾಪನೆಯನ್ನು ನೆರೆವೇರಿಸಿ ಮಾತನಾಡುತ್ತಾ, “ತಾನ ತನ್ನ ರಾಜಕೀಯ ಜೀವನದಲ್ಲಿ ಶಿಕ್ಷಣ, ನೀರಾವರಿ, ರಸ್ತೆ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದು, ಚಿಕ್ಕೋಡಿ ಸದಲಗಾ ಕ್ಷೇತ್ರ ವ್ಯಾಪ್ತಿಯಲ್ಲಿ 15 ವಸತಿ ಶಾಲೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದೇ ನಿದರ್ಶನವಾಗಿದೆ” ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕೋಡಿ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಮಾತನಾಡಿ, “ವಾಯವ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿರುವ ಪ್ರಕಾಶ ಹುಕ್ಕೇರಿ ಶಿಕ್ಷಣ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡು ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುತ್ತಿದ್ದಾರೆ. ದೂರಾಲೋಚನೆಯ ಅವರ ಕಾರ್ಯಗಳಿಂದ ತಾಲ್ಲೂಕಿನ ಜನರಿಗೆ ಸಾಕಷ್ಟು ಅನುಕೂಲವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿರಗಾಂವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೈಬುನ್ನೀಸಾ ತಹಶೀಲ್ದಾರ, ಖಡಕಲಾಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಕೇಶ ಚಿಂಚಣೆ, ಕಿರಣ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ರಾಜು ಗಸ್ತೆ, ಮುಖ್ಯ ಶಿಕ್ಷಕ ಎಸ್ ಜಿ ಕುಂಬಾರ, ಗುತ್ತಿಗೆದಾರ ಬಸವರಾಜ ಕೆ, ಸುದರ್ಶನ ತಮ್ಮಣ್ಣವರ, ರಾವಸಾಹೇಬ ಫಕೀರೆ, ಎಂ ಆರ್ ಮುನ್ನೋಳಿಕರ, ರಮೇಶ ಪಾಟೀಲ ಮುಂತಾದವರು ಭಾಗವಹಿಸಿದ್ದರು.