ಹೆಣ್ಣು ಗಂಡು, ವಯಸ್ಸಿನ ಬೇಧಭಾವವಿಲ್ಲದೇ ಆಚರಿಸುವ ಹಬ್ಬ ಹೋಳಿ ಹಬ್ಬ. ಇಂತಹ ಹೋಳಿ ಹಬ್ಬದ ರಂಗಿನಾಟಕ್ಕೆ ಕ್ಷಣ ಗಣನೆ ಆರಂಭಗೊಂಡಿದೆ. ಗುರುವಾರ ಕಾಮದಹನದ ಬಳಿಕ ಶುಕ್ರವಾರ ರಂಗಿನಾಟದಲ್ಲಿ ತೊಡಗಲು ಸಿದ್ಧತೆಗಳು ನಡೆದಿವೆ. ಮಾರುಕಟ್ಟೆಯಲ್ಲಿ ಬಣ್ಣಗಳದ್ದೇ ಕಾರುಬಾರು. ಚಿಕ್ಕಮಕ್ಕಳಿಗಾಗಿ ಪಿಚಕಾರಿ ಹಾಗೂ ಸಕ್ಕರೆ ಸರಗಳದ್ದೇ ಸಾಮ್ರಾಜ್ಯ ಎನ್ನುವಂತಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್.

ಹೋಳಿ ಹಬ್ಬದ ಸಂಭ್ರಮವನ್ನು ಹಿರಿಯ, ಕಿರಿಯ, ಮಹಿಳೆ, ಪುರುಷ ಹಾಗೂ ಜಾತಿಗಳ ಭೇದವಿಲ್ಲದೇ ಪರಿಸ್ಪರ ಬಣ್ಣ ಹಚ್ಚಿಕೊಂಡು, ಸಂಭ್ರಮಿಸುವದು ವಾಡಿಕೆ. ಈಗಾಗಲೇ ಎಲ್ಲ ಬಡಾವಣೆ ಹಾಗೂ ರಸ್ತೆಗಳಲ್ಲಿ ತಮಟೆ ಸದ್ದಿಗೆ ಯುವ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇನ್ನೂ ಶುಕ್ರವಾರ ನಡೆಯುವ ರಂಗು ರಂಗೀನ ಹಬ್ಬಕ್ಕೆ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ತರಹೇವಾರಿ ಬಣ್ಣಗಳು, ಪಿಚಕಾರಿಗಳು ಲಗ್ಗೆ ಇಟ್ಟಿವೆ. ವಿಜಯಪುರ ನಗರದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದ್ರೂ ನೈಸರ್ಗಿಕ, ಸಿಂಥೆಟಿಕ್ ಬಣ್ಣಗಳು ಕಣ್ಣಿಗೆ ಹಬ್ಬವನ್ನು ಸೃಷ್ಟಿಸಿವೆ.
ಇತ್ತ ಐದು ವರ್ಷದ ಮಕ್ಕಳಿಗೆ ಸಕ್ಕರೆಯಿಂದ ಮಾಡಿದ ಹಾರವನ್ನು ಹಾಕುವದು ಉತ್ತರ ಕರ್ನಾಟಕದ ವಿಶೇಷತೆಯಾಗಿರೊದ್ರಿಂದ ಸಕ್ಕರೆ ಸರ ಗಳು ಕೂಡಾ ಬಣ್ಣ ಬಳಿದುಕೊಂಡು ಮಾರಾಟಕ್ಕೆ ರೆಡಿಯಾಗಿವೆ. ಚಿಕ್ಕ ಪ್ಯಾಕೇಟ್ ನಿಂದ ಹಿಡಿದು 50 ಕೆಜಿ ಬಣ್ಣಗಳನ್ನು ಹೊತ್ತ ಚೀಲಗಳು ಮಾರುಕಟ್ಟೆಯಲ್ಲಿ ಸಿಗಹತ್ತಿವೆ. ಇನ್ನೂ ಪ್ರಜ಼್ಞಾವಂತರು ನೈಸರ್ಗಿಕ ಬಣ್ಣಗಳನ್ನು ಬಳಸಿ, ಪ್ರಾಣಿ ಪಕ್ಷಿಗಳಿಗೆ ಬಣ್ಣ ಬಳಿಯದಿರಲು ಜಾಗೃತಿ ಮೂಡಿಸುತ್ತಿದ್ದಾರೆ.
ಇನ್ನೂ ವಿಜಯಪುರ ನಗರದಲ್ಲಿ ರಂಗಿನ ಆಟವನ್ನು ಇನ್ನಷ್ಟು ರಂಗಾಗಿಸಲು ರಂಗ ಬರಸೆ, ರಂಗ್ ರೇವ್ ದಂತಹ ಶುಲ್ಕ ವಿರುವ ಕಾರ್ಯಕ್ರಮ ಆಯೋಜಿಸಲಾಗಿದೆ. ಇತ್ತ ನಗರದ ಶಿವಾಜಿ ವೃತ್ತದಲ್ಲಿ ನೈಸರ್ಗಿಕ ಬಣ್ಣವನ್ನು ಆಡುವಂತೆ ಉತ್ತೇಜಿಸಲು ಮಹಾನಗರ ಪಾಲಿಕೆ ಸದಸ್ಯ ರಾಹುಲ್ ಜಾಧವ ನೇತೃತ್ವದಲ್ಲಿ ರಂಗ ಹೋಲಿಕ್ ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತವಾಗಿ ಎಂಟ್ರಿ ಕೊಡಲಿದ್ದು, ಎಲ್ಲ ವಯಸ್ಸಿನವರಿಗೆ ಮುಕ್ತ ಅವಕಾಶ ಕಲ್ಪಿಸಿದ್ದಾರೆ. ಇಲ್ಲಿ ಡಿಜೆ ಹಾಗೂ ನೈಸರ್ಗಿಕ ಬಣ್ಣಗಳ ಮೂಲಕ ಬಣ್ಣದ ಆಚರಿಸಲು ಸಕಲ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಬೆಳಿಗ್ಗೆ 10 ರಿಂದ ಸಾಯಂಕಾಲ ವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಗುರುವಾರ ಹುಣ್ಣಿಮೆ ಪ್ರಾರಂಭವಾಗಿ ಅಂದೇ ಕಾಮದಹನ ನಡೆಯಲಿದೆ. ಶುಕ್ರವಾರ ಬಣ್ಣದ ಹಬ್ಬ ಆಚರಣೆ ನಡೆಸಲಾಗುತ್ತದೆ. ಒಟ್ನಲ್ಲಿ ವಿಜಯಪುರ ನಗರದಲ್ಲಿ ರಂಗೀನಾಟಕ್ಕೆ ರಂಗು ರಂಗಿನ ಸಿದ್ದತೆಗಳು ಭಲು ಜೋರಿನಿಂದ ನಡೆಯುತ್ತಿವೆ.
ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.