16ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರ ಈ ಬಜೆಟ್ ರಾಜ್ಯದಲ್ಲಿ ಅತ್ಯಂತ ಸ್ಫೂರ್ತಿದಾಯಕ ಬಜೆಟ್ ಇದಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಬಣ್ಣಿಸಿದ್ದಾರೆ.
ಈ ಕುರಿತು ವಿಷಯ ತಿಳಿಸಿದ ಅವರು, ರಾಜ್ಯದ ಆರ್ಥಿಕ ಪ್ರಗತಿಯ ಮುನ್ನೋಟಕ್ಕೆ ಆಶಾದಾಯಕ ಬಜೆಟ್ ಆಗಿದೆ. ಸಿಎಂ ಆಶಯದಂತೆ ದೇಶದ ಬಡ ಮತ್ತು ಮಧ್ಯಮ ವರ್ಗಗಳವರನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಪೂರಕವಾಗಿ ಪ್ರಸಕ್ತ ಸಾಲಿನ ಮುಂಗಡ ಪತ್ರವನ್ನು ಸಿಎಂ ಮಂಡಿಸಿದ್ದು, ಲೋಕೋಪಯೋಗಿ ಇಲಾಖೆಗೂ 11,841 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಬಜೆಟ್ ನಲ್ಲಿಅಲ್ಪಸಂಖ್ಯಾತರ ಸಮುದಾಯದ ಶಿಕ್ಷಣಕ್ಕೆ ಬಜೆಟ್ ನಲ್ಲಿ ಹೆಚ್ಚು ಒತ್ತು ಕೊಟ್ಟಿರುವುದಕ್ಕೆ ಹಾಗೂ ಸಮೃದ್ಧ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಮುನ್ನಡೆ ಸಾಧಿಸುತ್ತಿರುವ ರಾಜ್ಯಕ್ಕೆ ಈ ಬಜೆಟ್ ಮತ್ತಷ್ಟು ಸುಭದ್ರ ಅಡಿಪಾಯ ಹಾಕಿದೆ. 2025-26ನೇ ಆರ್ಥಿಕ ವರ್ಷದ ಪ್ರಸಕ್ತ ಬಜೆಟ್ ನಲ್ಲಿ ಮಧ್ಯಮ ವರ್ಗ, ಉದ್ಯಮ, ಕೃಷಿ, ಮೆಡಿಕಲ್ ಹೀಗೆ ಸರ್ವ ಕ್ಷೇತ್ರಕ್ಕೂ ಬಂಪರ್ ಕೊಡುಗೆ ನೀಡಲಾಗಿದೆ. ಇದೊಂದು ಜನರ ನಿರೀಕ್ಷೆಯನ್ನೂ ಮೀರಿದ ಅಭೂತಪೂರ್ವ ಬಜೆಟ್ ಆಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.