Bagalkot

ಕುರಿಗಾಹಿಗಳಿಗೆ ಕಳ್ಳರಿಂದ ರಕ್ಷಣೆಗಾಗಿ ಬಂದೂಕು ತರಬೇತಿಸಹಿತ ಲೈಸೆನ್ಸ್

Share

ಕಳ್ಳ ಕಾಕರ ಉಪಟಳದಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಇನ್ನು ಮುಂದೆ ಕುರಿಗಾಹಿಗಳಿಗೆ ಬಂದೂಕು ತರಬೇತಿ ನೀಡಿ ಲೈಸೆನ್ಸ್ ಕೊಡಲಾಗುವುದೆಂದು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ಕಳ್ಳರ ಕಾಟದಿಂದ ರಕ್ಷಿಸಿಕೊಳ್ಳಲು ಕುರಿಗಾಹಿಗಳಿಗೆ ಸ್ವರಕ್ಷಣೆಗಾಗಿ ಬಂದೂಕು ತರಬೇತಿ ನೀಡಲು ಜಿಲ್ಲೆಯ ಪೊಲೀಸ್‌ ಇಲಾಖೆ ಮುಂದಾಗಿದ್ದು, ಇದು ರಾಜ್ಯದಲ್ಲೇ ಮೊದಲ ಪ್ರಯೋಗ. ಕಳ್ಳರ ಕಣ್ಣು ಲಕ್ಷಾಂತರ ರೂ. ಬೆಲೆಬಾಳುವ ಕುರಿಗಳ ಮೇಲೆ ಬಿದ್ದಿದ್ದು ಕದಿಯಲು ದಾಳಿ ನಡೆಸುತ್ತಿದ್ದಾರೆ.ಕುರಿಗಾಹಿಗಳ ಹಿತರಕ್ಷಣಾ ಕಾಯಿದೆ ಜಾರಿಗೊಳಿಸಿ ಎಂದು ರಾಜ್ಯದಲ್ಲಿರುವ ಲಕ್ಷಾಂತರ ಕುರಿಗಾಹಿಗಳು ಹಾಗೂ ಆ ಸಮುದಾಯದ ಮುಖಂಡರು ಸರಕಾರದ ಮುಂದೆ ಬೇಡಿಕೆ ಇಡುತ್ತ ಬಂದಿರುವ ಮಧ್ಯೆ ಜಿಲ್ಲೆಯ ಪೊಲೀಸ್‌ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ ಬಂದೂಕು ತರಬೇತಿ ನೀಡಲು ಮುಂದಾಗಿದೆ. ಇದಕ್ಕಾಗಿ ಅರ್ಜಿಯನ್ನೂ ಕರೆಯಲಾಗಿದೆ.ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಮಾರ್ಚ್ 9ರಂದು ಕುರಿಗಾಹಿ ಶರಣಪ್ಪ ಜಮ್ಮನಕಟ್ಟಿ ಅವರು ತಮ್ಮ ದೊಡ್ಡಿಯ ಬಳಿ ಕುರಿ ಕಾಯುತ್ತಿರುವಾಗ ಮೂವರು ಕಳ್ಳರು ದಾಳಿ ನಡೆಸಿದ್ದರು.

ಕಳ್ಳತನ ತಡೆಯಲು ಯತ್ನಿಸಿದ ಅವರ ತಲೆಗೆ ಕಲ್ಲಿನಿಂದ ಜಜ್ಜಿ ಘೋರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆ ಜಿಲ್ಲೆಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ‘ಶರಣಪ್ಪ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕುರಿಗಾಹಿಗಳಿಗೆ ಬಂದೂಕು ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಆಸಕ್ತಿಯುಳ್ಳ ಎಲ್ಲರಿಗೂ ತರಬೇತಿ ಕೊಡುತ್ತೇವೆ. ತರಬೇತಿ ಪೂರ್ಣಗೊಂಡ ನಂತರ ಲೈಸೆನ್ಸ್‌ ಪಡೆದು ಬಂದೂಕು ಖರೀದಿಸಬಹುದುʼ ಎಂದು ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

Tags:

error: Content is protected !!