‘ನಟಿ ರನ್ಯಾ ರಾವ್ ಪ್ರಕರಣವನ್ನು ಜಾರಿ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ಸಮಗ್ರವಾಗಿ ತನಿಖೆ ನಡೆಸುತ್ತಿವೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸೂಕ್ತ ಕ್ರಮವಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ‘ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲಿದೆ. ಯಾವುದೇ ಪಕ್ಷದವರಿರಲಿ, ರಕ್ಷಣೆಗೆ ಯಾರೂ ಮುಂದಾಗಬಾರದು. ನಮ್ಮಪಕ್ಷದ ಯಾವ ಸಚಿವರು ಸಹ ಅವರಿಗೆ ಬೆಂಬಲ ನೀಡಿಲ್ಲ. ಹಾಗೇನಾದರೂ ದಾಖಲೆಗಳಿದ್ದರೆ ಬಿಜೆಪಿ ಬಿಡುಗಡೆ ಮಾಡಲಿ. ತಪ್ಪಿತಸ್ಥರು ಯಾರೇ ಆಗುದ್ದರೂ ಶಿಕ್ಷೆಯಾಗಲೇಬೇಕು’ ಎಂದರು.
‘ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಮಾಹಿತಿಯಿದೆ. ಈಗಾಗಲೇ ಅವರಿಬ್ಬರು ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಬಜೆಟ್ ಅನ್ನು ಸಹ ಸ್ವಾಗತಿಸಿದ್ದಾರೆ. ಅವರು ಯಾವಾಗ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ನೋಡಬೇಕಿದೆ. ಜೊತೆಗೆ ಮತ್ತೆ ಕೆಲವು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆ ಸೇರಲು ಉತ್ಸುಕತೆಯಲ್ಲಿದ್ದಾರೆ. ಸೂಕ್ತ ಸಮಯದಲ್ಲಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದು ಹೇಳಿದರು.
‘ರಾಜ್ಯ ಸಂಪುಟ ವಿಸ್ತರಣೆ ಮೇ ತಿಂಗಳಲ್ಲಿ ಆಗುವ ಸಾಧ್ಯತೆಯಿದೆ. ಹಿಂದಿ ಸಚಿವ ಸಂಪುಟದಲ್ಲಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಈ ಬಾರಿ ಸಿಗುವ ವಿಶ್ವಾಸವಿದೆ’ ಎಂದರು.