ಐತಿಹಾಸಿಕ ಧಾರವಾಡದ ಮುಳಮುತ್ತಲ ಗ್ರಾಮದ ಕಾಮದೇವರವನ್ನು ಕಳೆದ ಮಂಗಳವಾರ ರಾತ್ರಿ ಸಂಪ್ರದಾಯದಂತೆ ಪ್ರತಿಷ್ಠಾನೆ ಮಾಡಲಾಗಿದ್ದು, ಇಷ್ಟಾರ್ಥ ಸಿದ್ಧಿ ಕಾಮದೇವರ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಎರಡು ದಿನಗಳ ಕಾಲ ಕಾಮದೇವರ ಜಾತ್ರೆ ಇಲ್ಲಿ ನಡೆಯಲಿದ್ದು, ಜಿಲ್ಲೆ ಸೇರಿ ಹೊರ ಜಿಲ್ಲೆಯಿಂದ ಭಕ್ತರು ಬಂದು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ಕಳೆದ ಮಂಗಳವಾರ 10 ಗಂಟೆಗೆ ಗ್ರಾಮದ ಬಡಿಗೇರ ನಿವಾಸದಿಂದ ಅಗಸಿ ಮಂಟಪದವರೆಗೆ ಶ್ರೀ ಕಾಮದೇವರ ಮೂರ್ತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ತಂದು ಕೂರಿಸಲಾಗಿದೆ. ಇನ್ನೂ ಮುಳಮುತ್ತಲ ಕಾಮದೇವರ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಒಂದಿದೆ. ಅಲ್ಲದೇ ಇದು ಇಷ್ಟಾರ್ಥ ಸಿದ್ಧಿಸುವ ಕಾಮದೇವ ಎಂದೂ ಖ್ಯಾತಿ ಪಡೆದಿದೆ. 12ನೇ ಶತಮಾನದಲ್ಲಿ ಅಣ್ಣಿಗೇರಿ ಪಟ್ಟಣದಿಂದ ಕಾಮದೇವನ ಮೂರ್ತಿಯನ್ನು ಇಲ್ಲಿಗೆ ತರಲಾಯಿತು.
ಅಲ್ಲಿಂದ ಇಲ್ಲಿಯವರೆಗೂ ಮುಳಮುತ್ತಲ ಗ್ರಾಮದಲ್ಲೇ ಈ ಕಾಮದಹನ ನಡೆಯುತ್ತದೆ. ಬೇರೆ ಊರಿನವರು ಈ ಕಾಮದೇವನ ಮೂರ್ತಿ ತೆಗೆದುಕೊಂಡು ಹೋಗಬಾರದು ಎಂಬ ಕಾರಣಕ್ಕೆ ಕಾಮದೇವರ ದಹನದಂದು ಇಡೀ ಮುಳಮುತ್ತಲ ಗ್ರಾಮದ ಜನತೆ ಕೈಯಲ್ಲಿ ಶಸ್ತ್ರಾಸ್ತ್ರ ಹಿಡಿದು ಇದನ್ನು ಕಾಯುವೂದು ವಿಶೇಷವಾಗಿದೆ. ಇನ್ನೂ ಮಕ್ಕಳಾಗದವರು ಈ ಕಾಮದೇವರ ಜಾತ್ರೆಗೆ ಬಂದು ಫಲ ಸಿಗಲೆಂದು ಹರಕೆ ಕಟ್ಟಿ ಹೋಗುತ್ತಾರೆ. ಇಷ್ಟಾರ್ಥ ಸಿದ್ಧಿಯಾದವರು ತಾವು ಬೇಡಿದ ಹರಕೆಯನ್ನು ಕಾಮದೇವರಿಗೆ ಮುಟ್ಟಿಸಿ ಹೋಗುತ್ತಾರೆ. ಮುಳಮುತ್ತಲ ಗ್ರಾಮವಷ್ಟೇ ಅಲ್ಲದೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಜನ ಇಲ್ಲಿಗೆ ಬಂದು ಕಾಮದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ. ಈ ಜಾತ್ರೆ ಬುಧವಾರ ಸಂಜೆ ಅದ್ಧೂರಿಯಿಂದ ನಡೆಯಲಿದ್ದು,
ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳಲಿದ್ದಾರೆ. ಗುರುವಾರ ಹುಬ್ಬಿ ನಕ್ಷತ್ರದಲ್ಲಿ ಕಾಮದೇವರ ದಹನ ನಡೆಯಲಿದೆ ಎಂದು ತಿಳಿದುಬಂದಿದೆ.