Uncategorized

ಶ್ರೀ ರೇಣುಕಾಯಲ್ಲಮ್ಮದೇವಿಯ ಜಾತ್ರಾ ಮಹೋತ್ಸವ: ದೇವಸ್ಥಾನಕ್ಕೆ ನಡೆದಿತ್ತು ದೊಡ್ಡ ಮಟ್ಟದ ಹೋರಾಟ

Share

ಆ ದೇವಿ ಜಾಗೃತ ದೇವತೆ. ಆ ದೇವಿಗೆ ವರ ಕೇಳಿದಾಗ, ಆ ದೇವಿ ಆಶಿರ್ವದಿಸುತ್ತಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಆದಿಶಕ್ತಿ ಅವತಾರವಾಗಿರುವ ಜಗನ್ಮಾತೆಯ ರೂಪಿಣಿಯ ಆ ಮಂದಿರದಲ್ಲಿ ಬಡವರ ಭಾರತ ಹುಣ್ಣುಮೆ ನಿಮಿತ್ತ ಹಾಗೂ ಆ ದೇವಸ್ಥಾನದ ವಾರ್ಷಿಕೋತ್ಸವ ಆಚರಿಸಲಾಯಿತು. ಸಾವಿರಾರು ಭಕ್ತರು ಆಗಮಿಸಿ ಆ ದೇವಿಯ ಆಶಿರ್ವಾದ ಪಡೆದುಕೊಂಡರು. ಈ ಕುರಿತು ಇಲ್ಲಿದೆ ಡಿಟೇಲ್ಸ್.

ಜಗನ್ಮಾತೆಗೆ ಒಂಭತ್ತು ರೂಪಗಳಿವೆ. ಒಂಭತ್ತು ರೂಪಗಳಲ್ಲಿ ರೇಣುಕಾಯಲ್ಲಮ್ಮದೇವಿ ರೂಪವು ಒಂದು. ಸವದತ್ತಿ ಯಲ್ಲಮ್ಮ ಪ್ರಮುಖವಾದ ದೇವಸ್ಥಾನ. ಈ ದೇವಸ್ಥಾನ ಶಕ್ತಿಪೀಠಗಳಲ್ಲಿ ಒಂದಾಗಿದೆ. ಹೀಗೆಯೇ ಆ ದೇವಿಯನ್ನು ಆರಾಧಿಸಲು ವಿಜಯಪುರ ನಗರದಲ್ಲಿ ಒಂದು ದೇವಸ್ಥಾನವಿದೆ. ನಗರದ ಪ್ರಮುಖ ರಸ್ತೆಯಲ್ಲಿ ಇರುವ ದೇವಸ್ಥಾನವು ಪ್ರತಿದಿನ ಭಕ್ತರು ಬಂದು ಆಶಿರ್ವಾದ ಪಡೆಯುತ್ತಾರೆ. ಬಡವರ ಭಾರತ ಹುಣ್ಣುಮೆ ಹಾಗೂ ದೇವಸ್ಥಾನದ 7 ನೇ ವರ್ಷದ ಜಾತ್ರಾ ಮಹೋತ್ಸವ ಆಯೋಜಿಸಲಾಗಿತ್ತು. ನಗರದ ಪೊಲೀಸ್ ಕ್ವಾರ್ಟರ್ಸ್ ಹತ್ತಿರವಿರುವ ಶ್ರೀ ರೇಣುಕಾಯಲ್ಲಮ್ಮದೇವಿ ದೇವಸ್ಥಾನದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು. ಭಜನಾ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭವಾಯಿತು. ಪೂಜಾ ಅಲಂಕಾರ, ಪಲ್ಲಕಿ ಉತ್ಸವ, ಚೌಡಕಿ ಪದ ಹಾಗೂ ಕರಡಿ ಮಜಲ್ ಕಾರ್ಯಕ್ರಮ ಜರಗಿದವು. ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.ಬಳಿಕ ಅನ್ನ ಪ್ರಸಾದ ನಡೆಯಿತು.

ಇನ್ನೂ ಈ ದೇವಸ್ಥಾನದ ಜಾಗೆಯನ್ನು ಕೆಲವರು ಅತಿಕ್ರಮಿಸಿಕೊಂಡಿದ್ದರು. ದೇವಸ್ಥಾನದ ಜಾಗೆಯಲ್ಲಿ ಯಲ್ಲಮ್ಮನ ಭಕ್ತರು ಪಲ್ಲಕ್ಕಿ ಹಾಗೂ ಪೂಜೆ ಸಲ್ಲಿಸುತ್ತಿದ್ದ ಇತಿಹಾಸ ಹೊರತೆಗೆದು ಅದನ್ನು ಮರಳಿ ಭಕ್ತರ ವಶಕ್ಕೆ ತೆಗೆದುಕೊಡಲು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಹಲವು ವರ್ಷಗಳ ಸುದೀರ್ಘ ಹೋರಾಟ ನಡೆದಿತ್ತು‌. ಬಳಿಕ ಹೋರಾಟದಲ್ಲಿ ವಿಜಯವನ್ನು ಸಾಧಿಸಿ ಒಂದು ಸುಂದರ ಮಂದಿರ ನಿರ್ಮಿಸಲಾಯಿತು. ಇದೀಗ ಈ ದೇವಸ್ಥಾನವು ಸಾಕಷ್ಟು ಅಭಿವೃದ್ಧಿ ಗೊಂಡಿದೆ. ಸಾವಿರಾರು ಭಕ್ತರ ಆಶೋತ್ತರಗಳನ್ನು ಈಡೇರಿಸುವ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಸದ್ಯ ಈ ದೇವಿ ಕಷ್ಟ ಕಾರ್ಪಣ್ಯ ನಿವಾರಿಸುವ ಭಕ್ತರ ಪಾಲಿಗೆ ವರವಾಗಿದ್ದಾಳೆ. ಈ ಬಾರಿ ಜಾತ್ರೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡು ದೇವಿಯ ಕೃಪಾರ್ಶಿವಾದ ಪಡೆದರು.

ಇನ್ನೂ ಈ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ನೂರಾರು ಭಕ್ತರು ರೇಣುಕಾಯಲ್ಲಮ್ಮದೇವಿಯ ಆಶಿರ್ವಾದ ಪಡೆದು ಕೃತಾರ್ಥರಾಗುತ್ತಿದ್ದಾರೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್
ವಿಜಯಪುರ.

Tags:

error: Content is protected !!