Vijaypura

ಪಾರ್ದಿ ಗ್ಯಾಂಗ್‌ನ ಮೂವರನ್ನು ಪೊಲೀಸ್ ಕಸ್ಟಡಿಗೆ ಪಡೆದ ಪೊಲೀಸರು: ಸಖತ್ ಡ್ರೀಲ್ ಬಳಿಕ ಬಯಲಿಗೆ ಬರಲಿವೆ ಖತರ್ನಾಕ ಸತ್ಯಗಳು

Share

ಕಳೆದ ಕೆಲವು ದಿನಗಳಿಂದ ವಿಜಯಪುರಕ್ಕೆ ಮುಸುಕುಧಾರಿ ಡೆಡ್ಲಿ ಗ್ಯಾಂಗ್ ಎಂಟ್ರಿಕೊಟ್ಟು ಅಟ್ಟಹಾಸ ಮೆರೆದಿತ್ತು. ಈ ಖದೀಮರ ಓಡಾಟದಿಂದ ಗುಮ್ಮಟನಗರಿ ಅಕ್ಷರಶಃ ಬೆಚ್ಚಿಬಿದ್ದತ್ತು. ಅವರ ಚಲನವಲನದ ದೃಶ್ಯಗಳು ಅಲ್ಲಲ್ಲಿ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದವು. ತಡರಾತ್ರಿ ಕೈಯ್ಯಲ್ಲಿ ಕೊಡಲಿ, ರಾಡ್, ತಲವಾರ್ ಹಿಡಿದು ಬರ್ತಿದ್ದ ಮುಸುಕುಧಾರಿ ಗ್ಯಾಂಗ್ ಒಂಟಿ ಮನೆಗಳ ಮೇಲೆ ದಾಳಿ ಮಾಡಿ, ಚಿನ್ನಾಭರಣ ದೋಚಿ ಬಳಿಕ ಪರಾರಿಯಾಗುತ್ತಿದ್ದರು. ಇವರ ಅಟ್ಟಹಾಸಕ್ಕೆ ಇದೀಗ ಮೊದಲ ಬಲಿಯಾಗಿತ್ತು. ಘಟನೆ ಬಳಿಕ ಪೊಲೀಸರು ಮೂರು ಖತರ್ನಾಕ ಕಳ್ಳರನ್ನು ಬಂಧಿಸಿದ್ದರು. ಜೈಲಿನ ವಶದಲ್ಲಿದ್ದ ಆ ಮೂರು ಖತರ್ನಾಕ ಕಳ್ಳರನ್ನು ಮತ್ತೆ ವಶಕ್ಕೆ ಪಡೆದು ಡ್ರಿಲ್ ನಡೆಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್….

ವಿಜಯಪುರ ನಗರದಲ್ಲಿ ಜನೇವರಿ 16 ರಂದು ಘಟಿಸಿದ್ದ ಕಳ್ಳರ ಅಟ್ಟಹಾಸಕ್ಕೆ ಒಬ್ಬ ಅಮಾಯಕ ಬಲಿಯಾಗಿದ್ದ. ಹೀಗಾಗಿ ಪೊಲೀಸರು ಎಚ್ಚೆತ್ತುಕೊಂಡು ಒಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಇವರೆಲ್ಲರೂ ಮಹಾರಾಷ್ಟ್ರದ ಮೂಲದ ಪಾರ್ದಿ ಗ್ಯಾಂಗ್‌ ಸೇರಿದವರು‌. ಇವರು ವಿಜಯಪುರ ನಗರದ ಜೈನಾಪೂರ ಲೇಔಟ್, ರಾಜಕುಮಾರ್ ಲೇಔಟ್ ಸೇರಿದಂತೆ ನಗರದಲ್ಲಿ ಹಾವಳಿ ಇಟ್ಟಿದ್ದರು. ಮಹಾರಾಷ್ಟ್ರದ ಜತ್ ಮೂಲದ ಪಾರ್ದಿ ಗ್ಯಾಂಗ್ ನ ವಿಠ್ಠಲ ಚೌಹಾನ್, ಸುರೇಶ್ ಚೌಹಾನ್, ಆಕಾಶ್ @ ಅಕ್ಷಯ್ ರಾವತ್ ಬಂಧಿತ ಮುಸುಕುಧಾರಿ ಗಳಾಗಿದ್ದಾರೆ. ಜೈನಾಪೂರ ಲೇಔಟ್ ನಲ್ಲಿ ಮನೆ ದರೋಡೆ ವೇಳೆ ಸಂತೋಷ ಕನ್ನೂರ್ ಎಂಬುವನಿಗೆ ಚಾಕು ಇರಿದು ಮೊದಲ ಮಹಡಿಯಿಂದ ಎತ್ತಿ ಬಿಸಾಕಿದ್ದರು. ಮೊನ್ನೆ ಚಿಕಿತ್ಸೆ ಫಲಿಸದೆ ಸಂತೋಷ ಸಾವನ್ನಪ್ಪಿದ್ದರು.

ಇಡೀ ವಿಜಯಪುರ ನಗರವನ್ನೇ ಬೆಚ್ಚಿ ಬಿಳಿಸಿದ್ದ ಈ ಹೀನ ಕೃತ್ಯವು ಮುಸುಕುಧಾರಿ ದರೋಡೆಕೋರರಿಂದ ನಡೆದಿತ್ತು. ಈ ಪೈಕಿ ಮೂವರನ್ನ ಬಂಧಿಸಿ ವಶಕ್ಕೆ ಪಡೆದಿದ್ದ ಪೊಲೀಸರು ಕಳೆದ ನಾಲ್ಕು ದಿನಗಳ ಹಿಂದೆಯೆ ಕೋರ್ಟಗೆ ಹಾಜರು ಪಡೆಸಿದ್ದರು. ಮತ್ತೇ ನಿನ್ನೆ ಕೋರ್ಟನಿಂದ ಪಡೆದುಕೊಂಡ ಗಾಂಧಿ ಚೌಕ ಪೊಲೀಸರು ತಮ್ಮ ವಶಕ್ಕೆ ಪಡೆದು ಡ್ರೀಲ್ ನಡೆಸಿದ್ದಾರೆ. ಇನ್ನಿಬ್ಬರು ಖತರ್ನಾಕ್ ದರೋಡೆಕೋರರಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯಲ್ಲಿ ಮುಸುಕುಧಾರಿಗಳಿಗಾಗಿ ಕಾರ್ಯಾಚರಣೆ ನಡೆಸಿದ್ದರು. ಇದೀಗ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಒಟ್ನಲ್ಲಿ ಅಮಾಯಕನ ಸಾವಿಗೆ ಕಾರಣವಾದ ಪಾರ್ದಿ ಗ್ಯಾಂಗ್ ಸದಸ್ಯರನ್ನು ತೀವ್ರ ಡ್ರೀಲ್ ನಡೆಸಿರುವ ಪೊಲೀಸರು ಖತರ್ನಾಕ ಕಳ್ಳರಿಂದ ಮತ್ತಷ್ಟು ಭಯಾನಕ ಸತ್ಯಗಳನ್ನು ಕಕ್ಕಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ವಿಜಯಕುಮಾರ ಸಾರವಾಡ
ಇನ್ ನ್ಯೂಜ್,
ವಿಜಯಪುರ..

Tags:

error: Content is protected !!