ಕಾಗವಾಡ ಮತಕ್ಷೇತ್ರದ ಪೂರ್ವಭಾಗದ ರೈತರಿಗೆ ಶ್ರೀ ಬಸವೇಶ್ವರ(ಕೆಂಪವಾಡ) ಎತ ನೀರಾವರಿ ಯೋಜನೆ ಪೂರ್ಣಗೊಳಿಸಲು ಬರುವ ಬಜೆಟ್‌ನಲ್ಲಿ ೩೦೦ ಕೋಟಿ ರೂ. ಅನುದಾನ ಒದಗಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ನಾನು ಬೇಡಿಕೆ ಸಲ್ಲಿಸಿದ್ದೇನೆಯೆಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಶನಿವಾರ ರಂದು ಶೇಡಬಾಳ ಪಟ್ಟಣ ಪಂಚಾಯಿತಿಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಗವಾಡ ಮತಕ್ಷೇತ್ರದಲ್ಲಿ ಶ್ರೀ ಬಸವೇಶ್ವರ(ಕೆಂಪವಾಡ) ಎತ ನೀರಾವರಿ ಯೋಜನೆ ಪೂರ್ಣಗೊಳಿಸಲು ಸಾಕಷ್ಟು ಪ್ರಯತ್ನಗಳನ್ನು ಕೈಗೊಂಡಿದ್ದೇನೆ. ಇತ್ತೀಚೆಗೆ ಪ್ರಾಯೋಗಿಕವಾಗಿ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಬರಡಭೂಮಿಯಲ್ಲಿ ನೀರು ಹರಿಸಲಾಗಿದೆ. ಆದರೆ ಈ ಯೋಜನೆ ಸಂಪೂರ್ಣವಾಗಿ ಪೂರ್ಣಗೊಳ್ಳಲು ಇನ್ನೂ ೩೦೦ ಕೋಟಿ ಅಗತ್ಯವಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದು, ಬಜೆಟ್‌ನಲ್ಲಿ ಅಗತ್ಯ ಹಣಕಾಸು ಒದಗಿಸುವ ಭರವಸೆ ನೀಡಿದ್ದಾರೆ. ಬರುವ ಮಾರ್ಚ್ ತಿಂಗಳಲ್ಲಿ ಮುಖ್ಯಮಂತ್ರಿಗಳ ಸಮಯವನ್ನು ಪಡೆದು, ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುವುದೆಂದು ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಕೆಲ ವಿರೋಧಕರು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳುತ್ತಿದ್ದಾರೆ, ಇದು ತಪ್ಪು. ಈಗಾಗಲೇ ಕೃಷ್ಣಾ ನದಿಯಿಂದ ಕಾಗವಾಡ, ಶೇಡಬಾಳ, ಉಗಾರ, ಐನಾಪುರ ಪಟ್ಟಣಗಳಿಗೆ “ಅಮೃತ-೨.೦” ಯೋಜನೆಯ ಮೂಲಕ ನೀರು ಪೂರೈಸಲು ಯೋಜನೆಗೆ ಚಾಲನೆ ನೀಡಲಾಗಿದೆ.
ಕಾಗವಾಡ-ಉಗಾರ ರಸ್ತೆಯ ಅಭಿವೃದ್ಧಿಗಾಗಿ ೩೦ ಕೋಟಿ ವೆಚ್ಚದ ಕಾಮಗಾರಿ ಆರಂಭಿಸಲಾಗಿದೆ ಮತ್ತು ಐನಾಪುರದಲ್ಲಿ ೧೨ ಕೋಟಿ ವೆಚ್ಚದಲ್ಲಿ ಡಿಪ್ಲೋಮಾ ಕಾಲೇಜು ಮಂಜೂರಾಗಿದೆ. ೮ ಕೋಟಿ ರೂ. ವೆಚ್ಚದಲ್ಲಿ ಕಾಗವಾಡದ ಪ್ರಜಾಭವನ ನಿರ್ಮಿಸಲು ಮಂಜೂರುಗೊAಡಿದೆ. ಈಗಾಗಲೇ ಸರ್ಕಾರದಿಂದ ೧೦ ಕೋಟಿ ಅನುದಾನ ನೀಡಲು ನಿರ್ಧರಿಸಲಾಗಿದೆ. ಈ ಅನುದಾನವನ್ನು ಶ್ರೀ ಬಸವೇಶ್ವರ(ಕೆಂಪವಾಡ) ಎತ ನೀರಾವರಿ ಯೋಜನೆಗೆ ಬಳಸಲು ಯೋಚಿಸಲಾಗಿದೆ.
ನದಿ ಭಾಗದ ರಸ್ತೆ ಅಭಿವೃದ್ಧಿಗೆ ೧೦ ಕೋಟಿ ಹಾಗೂ ಮಂಗಸೂಳಿ-ಉಗಾರ ನಡುವಿನ ರಸ್ತೆ ಅಭಿವೃದ್ಧಿಗೆ ೭ ಕೋಟಿ ಮಂಜೂರಾಗಿದೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಮತಕ್ಷೇತ್ರದಲ್ಲಿ ನಡೆಯುತ್ತಿರುವುದಾಗಿ ಶಾಸಕ ರಾಜು ಕಾಗೆ ತಿಳಿಸಿದರು.