ಮಧ್ಯವರ್ತಿ ಮಾಡಿದ ಎಡವಟ್ಟಿಗೆ ಮೈಕ್ರೋಫೈನಾನ್ಸನವರು ಮನೆ ಸೀಜ್ ಮಾಡಿದ್ದು, ಅಂಗವಿಕಲ ಮಗಳೊಂದಿಗೆ ಮನೆ ಮಂದಿಯೆಲ್ಲ ಬೀದಿ ಪಾಲಾದ ಘಟನೆ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದಲ್ಲಿ ನಡೆದಿದೆ.

ಕಿತ್ತೂರು ತಾಲೂಕಿನ ಕಾದ್ರೋಳ್ಳಿ ಗ್ರಾಮದ ದಸ್ತಗೀರಸಾಬ್ ಮುಗಟಸಾಬ್ ಕಾದ್ರೋಳ್ಳಿ ಅವರಿಗೆ ಮಧ್ಯವರ್ತಿಯೋರ್ವ 5 ಲಕ್ಷ ಸಾಲ ಕೊಡಿಸಿದ್ದ. ಅದರಲ್ಲಿನ 2 ಲಕ್ಷ ಮಧ್ಯವರ್ತಿ ಪಡೆದಿದ್ದು, ಆದರೇ ಈಗ ಮೈಕ್ರೋ ಫೈನಾನ್ಸನಿಂದ ಒಟ್ಟು ಸಾಲವನ್ನು ಮರುಪಾತಿಸಲು ಒತ್ತಡ ಹಾಕಲಾಗುತ್ತಿದೆ. ಮೈಕ್ರೋ ಫೈನಾನ್ಸ್ ಕಂಪನಿಯವರು ಮನೆಗೆ ವಾರದ ಹಿಂದೆ ಬೀಗ ಜಡಿದು, ನೋಟಿಸ್ ಅಂಟಿಸಿದ್ದಾರೆ’ ಎಂದು ದಸ್ತಗೀರಸಾಬ್ ಮುಗಟಸಾಬ್ ಕಾದ್ರೋಳ್ಳಿ ಶನಿವಾರ ಅಳಲು ತೋಡಿಕೊಂಡಿದ್ದಾರೆ. 3 ಲಕ್ಷ ಸಾಲಕ್ಕೆ, ಈಗಾಗಲೇ 3.30 ಲಕ್ಷ ಪಾವತಿಸಿರುವೆ. 2 ಲಕ್ಷ ಪಡೆದ ಮಧ್ಯವರ್ತಿಗೆ ಕೇಳಿದರೆ ನನಗೇನೂ ಇದು ಸಂಬಂಧವಿಲ್ಲ ಎನ್ನುತ್ತಾರೆ. ನಿಗದಿತ ಅವಧಿಗೆ ಸಾಲದ ಕಂತು ಕಟ್ಟಿಲ್ಲ ಎಂದು ನಿಂದಿಸಿ, ಬೈಕ್ ಸಹ ಜಪ್ತಿ ಮಾಡಿದ್ದಾರೆ’ ಎಂದರು.
“ನನ್ನ ಕೊರಳಲ್ಲಿದ್ದ ತಾಳಿ ಗಿರವಿ ಇಟ್ಟು ಶುಕ್ರವಾರ 2 ಲಕ್ಷ ಹಣ ಒಟ್ಟುಗೂಡಿಸಿಕೊಂಡು ತುಂಬಲು ಹೋಗಿದ್ದೆವು. 2.5 ಲಕ್ಷ ಕಟ್ಟಿದರೆ ಮಾತ್ರ ಮನೆ ಬೀಗ ತೆರೆಯುತ್ತೇವೆ ಎನ್ನುತ್ತಾರೆ. ಉಳಿದ 50 ಸಾವಿರ ನಂತರ ಕಟ್ಟುತ್ತೇವೆ ಎಂದರೂ ಕೇಳುತ್ತಿಲ್ಲ’ ಎಂದು ಪತ್ನಿ ಶಹನಾಬಿ ಹೇಳಿದ್ದಾರೆ.
ಪತಿ, ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಸೇರಿ ಒಟ್ಟು 15 ಜನ ಮನೆಯಲ್ಲಿ ವಾಸಿಸುತ್ತೇವೆ. ಮನೆಗೆ ಬೀಗ ಹಾಕಿದ್ದರಿಂದ ಮಂದಿ ಮನೆ, ಊರ ಗುಡಿ ನಮ್ಮ ಮಲಗುವ ಸ್ಥಳವಾಗಿದೆ. ಅಂಗವೈಕಲ್ಯ ಇರುವ ಬಾಲಕಿಯನ್ನು ಹೊತ್ತುಕೊಂಡು ಓಡಾಡುವ ಕೆಟ್ಟ ಪರಿಸ್ಥಿತಿಯನ್ನು ಸಾಲ ಕೊಡಿಸಿದ ಮಧ್ಯವರ್ತಿ ನಮಗೆ ತಂದಿದ್ದಾರೆ’ ಎಂದು ದೂರಿದರು