ವಿಜಯಪುರ ನಗರ ಸೇರಿದಂತೆ ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ ಸರಣಿಯಾಗಿ ನಡೆದ ದರೋಡೆ, ಮನೆಕಳವು, ಕೊಲೆ, ಸುಲಿಗೆ, ಶೂಟೌಟ್, ದೌರ್ಜನ್ಯ, ಆನ್‌ಲೈನ್ ವಂಚನೆ ಪ್ರಕರಣಗಳು ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಜನತೆಯನ್ನು ಬೆಚ್ಚಿ ಬೀಳಿಸಿವೆ. ಇಂತಹದರ ನಡುವೆಯೇ ಮುಸುಕುಧಾರಿ ಗ್ಯಾಂಗ್ ದಾಳಿಗೆ ವಿಜಯಪುರದಲ್ಲಿ ಮೊದಲ ಬಲಿಯಾಗಿದೆ. ಈ ಕುರಿತು ಇಲ್ಲಿದೆ ಡಿಟೇಲ್ಸ್….
ಕಳೆದ ತಿಂಗಳು ಜ.16 ರಂದು ಮುಸುಕುಧಾರಿ ದರೋಡೆಕೋರರ ಗ್ಯಾಂಗ್‌ವೊಂದು ವಿಜಯಪುರ ನಗರದ ಜೈನಾಪುರ ಲೇಔಟ್‌ನಲ್ಲಿ ರಾತ್ರಿ ಮನೆಯೊಂದರ ಮುಖ್ಯ ಬಾಗಿಲನ್ನು ರಾತ್ರಿ ಮುರಿದು, ಒಳಗೆ ನುಗ್ಗಿ ಮನೆಯ ಮಾಲೀಕ ರಾದ ಸಂತೋಷ ಕಾನಾಳ ಎಂಬುವವರಿಗೆ ಚಾಕುವಿನಿಂದ ಇರಿದು, ಒಂದನೇಯ ಅಂತಸ್ತಿನಿಂದ ಕೆಳಗೆ ಕೆಡವಿ ಗಾಯಪಡಿಸಿ, ನಂತರ ಅವರ ಪತ್ನಿಯ ಕೊರಳಿನಲ್ಲಿದ್ದ 15 ಗ್ರಾಂ ಬಂಗಾರದ ತಾಳಿಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ನಗರ ಜನತೆ ಬೆದರುವಂತೆ ಮಾಡಿತ್ತು .ಆದರೆ ಇದೀಗ ಮುಸುಕುಧಾರಿ ಗ್ಯಾಂಗ್ ದಾಳಿಗೆ ವಿಜಯಪುರದಲ್ಲಿ ಮೊದಲ ಬಲಿಯಾಗಿದೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. 31 ವರ್ಷದ ಸಂತೋಷ ಕನಾಳ ಸಾವನ್ನಪ್ಪಿದ ದುರ್ದೈವಿ. ಮುಸುಕುಧಾರಿ ಗ್ಯಾಂಗ್ ಎದೆ ಹಾಗೂ ಬೆನ್ನಿಗೆ ಚಾಕು ಹಾಕಿ ಪತ್ನಿ ಭಾಗ್ಯಜ್ಯೋತಿ ಕೊರಳಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಇನ್ನೂ ಘಟನೆ ಬಳಿಕ ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದೆ. ಕಿಡ್ನಿಗೆ ಸೊಂಕು ತಗುಲಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಬಳಿಕ ಅಪೋಲೋ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಸ್ತ್ರ ಚಿಕಿತ್ಸೆಗೆ 20ಲಕ್ಷ ಖರ್ಚು ಮಾಡಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾಯಂಕಾಲ ಸಂತೋಷ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆಯ ದಿಂಡಿವಾರ ಗ್ರಾಮಕ್ಕೆ ಮೃತದೇಹ ತರಲಾಗುತ್ತಿದೆ.
ಒಟ್ನಲ್ಲಿ ವಿಜಯಪುರ ನಗರದಲ್ಲಿ ಕಳ್ಳರ ಹಾವಳಿಗೆ ಅಮಾಯಕ ವ್ಯಕ್ತಿ ಬಲಿಯಾಗಿದ್ದಾನೆ. ಈ ಘಟನೆ ವಿಜಯಪುರ ನಗರದ ಜನತೆಯನ್ನು ಮತ್ತಷ್ಟು ಭಯಭೀತಗೊಳಿಸಿದೆ. ಇನ್ನಾದರೂ ಪೊಲೀಸರು ಕಳ್ಳರನ್ನು ಬಗ್ಗು ಬಡಿಯಲೇಬೇಕು ಎಂದು ಆಗ್ರಹಿಸುತ್ತಿದ್ದಾರೆ.
ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ..