Uncategorized

ಭಾಗಪ್ಪ ಹರಿಜನ ಕೊಲೆ ಕೇಸ್: ಆರೋಪಿಗಳನ್ನು ಕಸ್ಟಡಿಗೆ ಪಡೆದ ಪೊಲೀಸರು

Share

ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ಕು ಆರೋಪಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಯದ ಮುಂದೆ ಹಾಜರು ಪಡಿಸಿದ್ದರು. ಇದೀಗ ನ್ಯಾಯಾಲಯವು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೊಟ್ಟಿದೆ. ಇನ್ನೂ ಪೊಲೀಸರು ಭಾಗಪ್ಪ ಹರಿಜನ ಹತ್ಯೆಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಿದ್ದಾರೆ. ಈ ಕುರಿತು ಇಲ್ಲಿದೆ ಡಿಟೇಲ್ಸ್…

ಇಡೀ ವಿಜಯಪುರ ಜಿಲ್ಲೆಯನ್ನು ಬೆಚ್ಚಿಬಿಳಿಸಿದ್ದ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಮದೀನಾ ನಗರದಲ್ಲಿ ಫೆ.11 ರ ರಾತ್ರಿ ಭೀಮಾತೀರದ ಕುಖ್ಯಾತ ಹಂತಕ ಭಾಗಪ್ಪ ಹರಿಜನ ಕೊಲೆ ನಡೆದಿತ್ತು. ಭಾಗಪ್ಪ ಹರಿಜನ ತನ್ನ ಮನೆಯ ಹೊರಗಡೆ ವಾಕಿಂಗ್ ಮಾಡುವಾಗ ಆರೋಪಿಗಳು. ಆಟೋ ಹಾಗೂ ಬೈಕ್‌ನಲ್ಲಿ ಬಂದು ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಕೊಡಲಿ, ಮಚ್ಚು ಹಾಗೂ ಜಂಬೆಯಿಂದ ಹೊಡೆದು ಕೊಲೆ ಮಾಡಿದ್ದರು.

ಭಾಗಪ್ಪ ಕೊಲೆ ಪ್ರಕರಣ ಸಂಬಂಧ ಇಂಡಿ ತಾಲ್ಲೂಕಿನ ಅಗರಖೇಡದ ಪಿಂಟು ಮೇಲಿನಕೇರಿ (26), ಸುದೀಪ ಕಾಂಬಳೆ (20), ಹೊರ್ತಿ ಗ್ರಾಮದ ರಾಹುಲ ತಳಕೇರಿ (20), ಬೈಲಹೊಂಗಲದ ಗದಿಗೆಪ್ಪ ಬೆನಕೊಪ್ಪ (27) ಎಂಬ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು‌. ಬಳಿಕ ನಾಲ್ಕು ಆರೋಪಿಗಳನ್ನು ಜಿಲ್ಲಾ ಆಸ್ಪತ್ರೆ ಯಲ್ಲಿ ಆರೋಗ್ಯ ತಪಾಸಣೆ ನಡೆಸಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

ಇನ್ನೂ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ ಎರಡನೇ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣದಲ್ಲಿ ಇನ್ನೂ ತನಿಖೆ ಬಾಕಿ ಇದೆ ಇದ್ದು ತನಿಖೆಗೆ ಆರೋಪಿಗಳ ವಿಚಾರಣೆ ಬಾಕಿ ಇದೆ ಎಂಬ ಪೊಲೀಸ್ ಮನವಿಯನ್ನು ಪುರಸ್ಕರಿಸಿ ಐದು ದಿನಗಳ ಕಾಲ ನಗರದ ಗಾಂಧಿಚೌಕ್ ಪೊಲೀಸರ ವಶಕ್ಕೆ ನೀಡಲು ಆದೇಶಿಸಿದರು. ಬಳಿಕ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ತನಿಖೆಯಲ್ಲಿ ಕೊಲೆಗೆ ಸಂಚು ರೂಪಿಸಿದ್ದು ಯಾವಾಗ? ಬಾಹ್ಯ ಮತ್ತು ಆಂತರಿಕ ಬೆಂಬಲ ನೀಡಿದ್ದು ಯಾರು? ಪಿಸ್ತೂಲ್ ಆರೋಪಿಗಳ ಕೈಗೆ ಕೊಟ್ಟವರಾರು? ಎಂಬ ವಿಷಯಗಳು ಸೇರಿದಂತೆ ಇನ್ನೂ ಹೆಚ್ಚಿನ ತನಿಖೆ ಕೈಗೊಳ್ಳಲಿದ್ದಾರೆ.

ಒಟ್ನಲ್ಲಿ ಪೊಲೀಸರು ಭಾಗಪ್ಪ ಹರಿಜನ ಕೊಲೆ ಪ್ರಕರಣದಲ್ಲಿನ ಆರೋಪಿಗಳಿಂದ ಮತ್ತಷ್ಟು ವಿಷಯಗಳ ಕುರಿತು ಮಾಹಿತಿ ಕಲೆ ಹಾಕಲಿದ್ದಾರೆ. ಆರೋಪಿಗಳ ವಿಚಾರಣೆ ಬಳಿಕ ಮತ್ತಷ್ಟು ಮಾಹಿತಿ ಬಹಿರಂಗಗೊಳ್ಳುವ ಸಾಧ್ಯತೆ ಇದೆ.

ವಿಜಯಕುಮಾರ ಸಾರವಾಡ,
ಇನ್ ನ್ಯೂಜ್,
ವಿಜಯಪುರ.

Tags:

error: Content is protected !!