ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದ ಕಾರಣ ಶವವನ್ನು ನಡುರಸ್ತೆಯಲ್ಲಿಟ್ಟು ಪ್ರತಿಭಟಿಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠದಲ್ಲಿ ನಡೆದಿದೆ.

ಖಾನಾಪೂರ ತಾಲೂಕಿನ ಲಿಂಗನಮಠದಲ್ಲಿ ಸ್ಮಶಾನಕ್ಕೆ ತೆರಳಲು ಯಾವುದೇ ದಾರಿಯಿಲ್ಲ. ಹಲವಾರು ಭಾರಿ ಗ್ರಾಮಸ್ಥರು ಕಂದಾಯ ಇಲಾಖೆಯ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತಿಲ್ಲವಂತೆ. ನಿನ್ನೆ ತೀರಿ ಹೋದ ಅನಾಥ ವ್ಯಕ್ತಿಯ ಶವ ಸಂಸ್ಕಾರಕ್ಕೆಂದು ಬಂದಾಗ ಸ್ಮಶಾನಕ್ಕೆ ಹೋಗಲು ದಾರಿ ಕಾಣದೇ ಹೆಣಗಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮಧ್ಯಾನ್ಹ 3ಗಂಟೆಗೆ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಥಳಕ್ಕೆ ಬಾರದ ತಹಸೀಲ್ದಾರ್ ಹಾಗೂ ಉಪತಹಶೀಲ್ದಾರರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಉಪ ತಹಸೀಲ್ದಾರ್ ರೋಹಿತ ಬಡಚಿಕರ ಉಢಾಪೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ಸ್ಮಶಾನಕ್ಕೆ ಹೋಗಲು ದಾರಿಯಿಲ್ಲದೇ ಉಂಟಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.